ಚಿಕ್ಕ ಕುಟುಂಬದ ಆದರ್ಶ ಪಾಲಿಸಿ: ಡಾ. ರಂಗನಾಥ್

3 Min Read

 

 

ಚಿತ್ರದುರ್ಗ,(ಜುಲೈ.19) : ಚಿಕ್ಕ ಕುಟುಂಬದ ಆದರ್ಶವನ್ನು ಪಾಲಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರೆಯುವ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳನ್ನು ಅರ್ಹ ಫಲಾನುಭವಿಗಳು ಅಳವಡಿಸಿಕೊಂಡು ಮಿತ ಸಂಧಾನದ ಕಡೆ ತಿರುಗಿದರೆ ಜನಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ತಿಳಿಸಿದರು.

ಇಲ್ಲಿನ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ಮಾರ್ಗದರ್ಶನ ಸಲಹೆ, ಸೂಚನೆಗಳನ್ನು ಸಾರ್ವಜನಿಕರು ಅಳವಡಿಸಿಕೊಳ್ಳದೆ ಹೋದಲ್ಲಿ ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜನಸಂಖ್ಯೆ ಹೆಚ್ಚಾದಂತೆ ಮೂಲಭೂತ ಸೌಕರ್ಯಗಳ ಕೊರತೆ, ಬಡತನ, ನಿರುದ್ಯೋಗ ಆಹಾರದ ಕೊರತೆ, ಹೆಚ್ಚಾಗಿ ಸಾರ್ವಜನಿಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇಲಾಖೆ ಅಧಿಕಾರಿಗಳು ಮತ್ತು ಇತರೆ ವೃಂದದ ಕಾರ್ಯಕರ್ತರು ಸಾರ್ವಜನಿಕರಲ್ಲಿ ದಿನನಿತ್ಯ ಜಾಗೃತಿ ಮೂಡಿಸುವುದರ ಮೂಲಕ ಜನಸಂಖ್ಯೆ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಿಂದ ಹಿಡಿದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಚಿಕ್ಕ ಕುಟುಂಬ ಹೊಂದಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ದೇಶಾಭಿವೃದ್ಧಿಗೆ ದಾಪುಗಾಲು ಹಾಕಬಹುದು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ, ಗಂಡಾಂತರ ಸಮಸ್ಯೆಗಳಿರುವಂತಹ ತಾಯಂದಿರು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಿಂತ ತಮ್ಮ ಪತಿಯವರಿಗೆ ಮನವೊಲಿಸಿ ಸೂಕ್ತ, ಸರಳ ವಿಧಾನವಾದ, ಪುರುಷತ್ವಕ್ಕೆ ಹಾನಿಯಾಗದ, ದಾಂಪತ್ಯ ಜೀವನ ಸುಖಮಯವಾಗಿರುವ, ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಲು ಸ್ತ್ರೀಯರು ಮೊದಲು ಮನ ಒಪ್ಪಬೇಕು. ನಂತರ ಪುರುಷರು ಮುಂದೆ ಬರುವುದರಲ್ಲಿ ಯಾವುದೇ ಸಂಕೋಚವಿಲ್ಲ ಎಂದರು.

ಗ್ರಾಮಾಂತರ ಪ್ರದೇಶದಿಂದ ಹಿಡಿದು ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ಐಇಸಿ ಮುಖಾಂತರ ಜೂನ್ 27ರಿಂದಲೂ ಸಾರ್ವಜನಿಕರಿಗೆ ಮಾಹಿತಿ ನೀಡಿ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸುತ್ತ ಮಿತ ಸಂತಾನ ಹೊಂದಲು ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಅರ್ಹ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮೂರು ತಿಂಗಳಿಗೊಮ್ಮೆ ಡಿಂಪ ಇಂಜೆಕ್ಷನ್, ವಾರಕ್ಕೊಮ್ಮೆ ಛಾಯಾ ಮಾತ್ರೆಗಳು ಮತ್ತು ವಂಕಿಧಾರಣೆ. ಗಂಡು ಮಕ್ಕಳಿಗೆ ನಿರೋದ್ಗಳ ಉಚಿತ ವಿತರಣೆ ಮಾಡುತ್ತಾ ಜನಸಂಖ್ಯಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ ಸಾರ್ವಜನಿಕರು ಇವುಗಳ ಸದುಪಯೋಗಪಡಿಸಿಕೊಂಡಲ್ಲಿ ಜನಸಂಖ್ಯೆ ನಿಯಂತ್ರಿಸಬಹುದಾಗಿದೆ ಎಂದರು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಾಲಿಮಂಜಪ್ಪ ಮಾತನಾಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಅರ್ಹ ಫಲಾನುಭವಿಗಳನ್ನು ಯಾವುದೇ ಸಮಯದಲ್ಲೂ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅವರಿಗೆ ಸೂಕ್ತ ಶಾಶ್ವತ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಲು ಸದಾ ಸಿದ್ಧರಿದ್ದೇವೆ. “ಚಿಕ್ಕ ಕುಟುಂಬ ಚೊಕ್ಕ ಕುಟುಂಬ” ಮಿತ ಸಂತಾನದ ಕಡೆ ಗಮನಹರಿಸಿ ಸರ್ಕಾರದ ಸೌಲಭ್ಯ ಪಡೆದುಕೊಂಡು ಜನಸಂಖ್ಯಾ ನಿಯಂತ್ರಣದ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ ಮಾತನಾಡಿ, ಸಮುದಾಯ ಮತ್ತು ಆರೋಗ್ಯ ಇಲಾಖೆಯ ಮಧ್ಯೆ ಸೇತುವೆಯಾಗಿ ಆರೋಗ್ಯ ಸಿಬ್ಬಂದಿ ಉತ್ತಮ ಆರೋಗ್ಯ ಸೇವೆಗಳನ್ನು ಸಲ್ಲಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಾ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಸಂದರ್ಭ ಸೇರಿದಂತೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮತ್ತು ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಸಕಾಲಕ್ಕೆ ಮಾಡಿ ಸಾರ್ವಜನಿಕರ ಜೀವ ಉಳಿಸಿದ ಹೆಸರಾಂತ ಶಸ್ತ್ರಚಿಕಿತ್ಸಕರಾದ ಡಾ.ಸಾಲಿಮಂಜಪ್ಪ ಅವರ ಉತ್ತಮ ಸೇವೆಯನ್ನು ಇಲಾಖೆ ಗುರುತಿಸಿ ಗೌರವ ಸಮರ್ಪಣೆ ಮುಖಾಂತರ ಸನ್ಮಾನಿಸಿತು. ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಲು ಫಲಾನುಭವಿಗಳಿಗೆ ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಕರೆತಂದ ಸಾಧಕರಾದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಸೇರಿದಂತೆ  ವಿವಿಧ ವೃಂದದ 20 ನೌಕರರಿಗೆ  ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್. ಗುರುಮೂರ್ತಿ, ಗಂಗಾಧರ್, ರಂಗಾರೆಡ್ಡಿ, ಪ್ರಶಾಂತ್, ಪ್ರವೀಣ್, ರೇಣುಕಾ ಸ್ವಾಮಿ, ಗೋಪಿಕೃಷ್ಣ, ನಂದೀಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ, ನಗರಸಭಾ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತಿರಿದ್ದರು.

Share This Article
Leave a Comment

Leave a Reply

Your email address will not be published. Required fields are marked *