ಬೆಳಗಾವಿ : ಈ ಬಾರಿ ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಫಸಲು ಚೆನ್ನಾಗಿ ಬಂದಿದೆ. ಇನ್ನೇನು ಬೆಳೆ ಕೈಗೆ ಬರುತ್ತೆ ಅಂತ ಆಸೆಯಿಂದ ಕಾಯುತ್ತಿದ್ದ ರೈತರ ಕನಸುಗಳಿಗೆ ಅಕಾಲಿಕ ಮಳೆ ದೊಪ್ಪನೆ ಕಲ್ಲು ಬಂಡೆಯನ್ನೆ ಎತ್ತಿ ಹಾಕಿದೆ. ಬೆಳೆದ ಬೆಳೆಯೆಲ್ಲಾ ನಾಶವಾಗಿ, ನಷ್ಟದಲ್ಲಿರುವ ರೈತರು ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಈ ಬಗ್ಗರ ಮಾತನಾಡಿದ್ದಾರೆ. ರೈತರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ರಾಜ್ಯದ ಬೊಕ್ಕಸದಿಂದಲೇ ನೀಡಬೇಕು, ಕೇಂದ್ರದಿಂದ ಬರುವ ಪರಿಹಾರಕ್ಕಾಗಿ ಕಾಯುವುದು ಬೇಡ ಎಂದಿದ್ದಾರೆ.
ರಾಜ್ಯದ ಪರಿಸ್ಥಿತಿ ಕೇಂದ್ರಕ್ಕೆ ಗೊತ್ತೆ ಇದೆ. ಮೇಲಿಂದ ಮೇಲೆ ಮನವಿ ಮಾಡುತ್ತಿದ್ದೇವೆ. ವಾಸ್ತವಿಕ ಸ್ಥಿತಿ ಗೊತ್ತಿರುವ ವಿಚಾರ. ಹೀಗಾಗಿ ಸಿಎಂ ಬೊಮ್ಮಾಯಿ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಹಣ ಬಂದೇ ಬರುತ್ತದೆ. ಹೆಚ್ಚು ಹಣ ತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ರೈತರ ನೆರವಿಗೆ ಧಾವಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಈ ಬಗ್ಗೆ ಸಿಎಂ ಹಾಗೂ ಕಂದಾಯ ಸಚುವರಿಗೆ ಮನವಿ ಮಾಡ್ತೇನೆ. ಈಗಿರುವ ಸ್ಥಿತಿಯಲ್ಲಿ ರೈತರಿಗೆ ತಕ್ಷಣ ನೆರವು ನೀಡದೆ ಹೋದಲ್ಲಿ ಅವರು ಬದುಕು ನಡೆಸುವುದು ಕಷ್ಟವಾಗುತ್ತದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.