ಹಗಲು-ರಾತ್ರಿ ಕೆಲಸ ಮಾಡಿ ಮತದಾರರ ಋಣ ತೀರಿಸುತ್ತೇನೆ : ಶಾಸಕ ಎಂ.ಚಂದ್ರಪ್ಪ

2 Min Read

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಚುನಾವಣೆಯಲ್ಲಿ ಗೆದ್ದ ಮೇಲೆ ಕ್ಷೇತ್ರದಲ್ಲಿ ನಾವು ಮಾಡಿದ ಕೆಲಸಗಳನ್ನು ನಾಲ್ವರು ನೆನಪಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಭರಮಸಾಗರದ ಎಸ್.ಜೆ.ಎಂ.ಬಡಾವಣೆಯಲ್ಲಿ ಐವತ್ತು ಲಕ್ಷ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಹಗಲು-ರಾತ್ರಿ ಕೆಲಸ ಮಾಡಿ ಮತದಾರರ ಋಣ ತೀರಿಸುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರೀತಿ ವಿಶ್ವಾಸಕ್ಕಿಂತ ದೊಡ್ಡ ಅಧಿಕಾರ ಮತ್ತೊಂದಿಲ್ಲ. ಈ ಹಿಂದೆ ಹೊಳಲ್ಕೆರೆ ಕ್ಷೇತ್ರದಿಂದ ಗೆದ್ದು ಮಂತ್ರಿಯಾದವರು ಈಗ ಏನಾಗಿದ್ದಾರೆನ್ನುವುದು ನಿಮಗೆಲ್ಲಾ ಗೊತ್ತಿದೆ. ಹೊಸದಾಗಿ ನಾನು ಶಾಸಕನಾಗಿದ್ದಾಗ ಸರ್ಕಾರದಿಂದ ಹಣ ತರುವುದು ಕಷ್ಟವಾಗಿತ್ತು. ಆಗಲೆ ನಾಲ್ಕು ಸಾವಿರ ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರಿಂದ ಯುವಕರು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿಸಿ ಎರಡನೆ ಬಾರಿಗೆ ಜಯಶಾಲಿಯನ್ನಾಗಿಸಿದರು. ಐದು ಬಾರಿ ಗೆದ್ದಿದ್ದೇನೆ. ಇದಕ್ಕೆ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸವೇ ಕಾರಣ ಎಂದು ಭಾವುಕರಾದರು.

ಕ್ಷೇತ್ರದಲ್ಲಿರುವ 493 ಹಳ್ಳಿಗಳ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ರಸ್ತೆ, ಬ್ರಿಡ್ಜ್, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಯಾವ ಕೆಲಸವನ್ನು ಕಡೆಗಣಿಸಿಲ್ಲ. ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿದೆ. ಎಷ್ಟೇ ಕೋಟಿ ರೂ.ಖರ್ಚಾದರೂ ಪರವಾಗಿಲ್ಲ. ಸಿರಿಗೆರೆ ಶ್ರೀಗಳ ಜೊತೆ ಚರ್ಚಿಸಿ ಸರ್ಕಾರದಿಂದ ಹಣ ತಂದು ರಿಪೇರಿ ಮಾಡಿಸುತ್ತೇನೆ. ಮೂರ್ನಾಲ್ಕು ತಿಂಗಳಿನಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆರೆ ಕಟ್ಟೆಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ರಸ್ತೆಗಳು ಹಾಳಾಗಿದೆ. ಸೇತುವೆ ಮುಳುಗಡೆಯಾಗಿದೆ. ಮತ್ತೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಬೇವಿನಹಳ್ಳಿ ಬಳಿ ದೊಡ್ಡ ಸೇತುವೆ ನಿರ್ಮಿಸಿ ಇನ್ನೊಂದು ತಿಂಗಳೊಳಗೆ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡುತ್ತೇನೆ. ಸರ್ಕಾರದಿಂದ ಹಣ ತರುವುದು ನನಗೆ ಕಷ್ಟವಲ್ಲ. ಯಾವುದೇ ಇಲಾಖೆಯಲ್ಲಾಗಲಿ ಕೆಲಸ ತೆಗೆದುಕೊಳ್ಳುತ್ತೇನೆ. ಎಸ್.ಜೆ.ಎಂ.ಬಡಾವಣೆಯಲ್ಲಿ ಸಿ.ಸಿ.ರಸ್ತೆಗೆ ಐವತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆ. ಇನ್ನು ಐವತ್ತು ಲಕ್ಷ ರೂ.ಗಳಿಗೆ ಟೆಂಡರ್ ಕರೆದು ಈ ಭಾಗದಲ್ಲಿ ಕೆಲಸ ಮಾಡುತ್ತೇನೆ. ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಕಾಂಕ್ರಿಟ್ ರಸ್ತೆ ಮಾಡಿಸಲು ಒಂದು ಕೋಟಿ ರೂ.ಅನುದಾನ ತರುವುದಾಗಿ ಆಶ್ವಾಸನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಲಕ್ಷ್ಮಣ್‍ನಾಯ್ಕ, ಡಿ.ಎಸ್.ಪ್ರವೀಣ್, ಜಯಣ್ಣ, ಚಂದ್ರಶೇಖರ, ವೀರೇಶ್, ಗುತ್ತಿಗೆದಾರ ನಾಗನಗೌಡ ಊರಿನ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *