ಚಿಕ್ಕಮಗಳೂರು: ಸಿಡಿ ಕೇಸ್ ವಿಚಾರವಾಗಿ ಇತ್ತಿಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ನಡೆಸಿ, ಕೆಂಡಕಾರಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಹೆಸರೇಳದೆ ವಿಷಕನ್ಯೆ ಅಂತೆಲ್ಲಾ ನಿಂದಿಸಿದ್ದರು. ಈ ವಿಚಾರಕ್ಕೆ ಎಲ್ಲರ ಚಿತ್ತ ಲಕ್ಷ್ಮೀ ಹೆಬ್ಬಾಳ್ಕರ್ ಕಡೆಗೆ ನೆಟ್ಟಿತ್ತು. ಈಗ ಲಕ್ಷ್ಮೀ ಹೆಬ್ಬಳ್ಕರ್ ಯಾವ ರೀತಿಯ ಉತ್ತರ ಕೊಡಬಹುದು ಎಂದೇ ಕಾದಿದ್ದರು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿಚಾರವಾಗಿ ಗಾಂಧಿ ತತ್ವ ಪಾಲನೆ ಮಾಡಿದ್ದಾರೆ.

ಕೆಟ್ಟದ್ದನ್ನು ಕೇಳಲ್ಲ, ಕೆಟ್ಟದ್ದನ್ನು ಮಾತನಾಡಲ್ಲ, ಕೆಟ್ಟದ್ದನ್ನು ನೋಡಲ್ಲ ಎಂದು ಶಪಥ ಮಾಡಿದ್ದಾರೆ. ಸಿಡಿ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮಾಧ್ಯಮದವರಿಗೆ ಈಗಾಗಲೇ ನಾನು ಮನವಿಯನ್ನು ಮಾಡಿಕೊಂಡಿದ್ದೇನೆ. ಈ ಮೂರು ತಿಂಗಳು ನಾನು ಮಾಡಿದ ಕೆಲಸದಿಂದ ಎಲೆಕ್ಷನ್ ನಲ್ಲಿ ಗೆಲ್ಲಬೇಕಿದೆ. ನಾನು ಬಹಳ ತಾಳ್ಮೆಯಿಂದ ಇರುತ್ತೇನೆ ಎಂದಿದ್ದಾರೆ.

ಇನ್ನು ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವೆ ಹೇಳಿಕೆಯನ್ನು ನಾನು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಕುಮಾರಸ್ವಾಮಿ ಅಣ್ಣನ ಬಗ್ಗೆ ನನಗೆ ಬಹಳ ಗೌರವ ಇದೆ. ಅವರು ಯಾವ ಮೂಲದಿಂದ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಮಹಿಳೆಯರ ಪರವಾದ ಸರ್ಕಾರವನ್ನು ನಾವೂ ರೂಪಿಸಬೇಕಿದೆ ಎಂದಿದ್ದಾರೆ.


