ಬೆಂಗಳೂರು: ನೀವೆಲ್ಲ ಸೇರಿ ಸರಕಾರವನ್ನು ಕೆಡವಲು ಸ್ಕೆಚ್ ಹಾಕಿದಾಗ ನಾನು ಅಮೆರಿಕದಲ್ಲಿ ಇದ್ದೆ ನಿಜ. ಅಂದು ಆದಿಚನಗಿರಿ ಶ್ರೀಗಳು ಅಮೆರಿಕದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಸ್ವಾಮೀಜಿ ಅವರು ಕರೆದ ಕಾರಣ ನಾನು ಅಮೆರಿಕಕ್ಕೆ ಹೋಗಬೇಕಾಯಿತು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಗ ನಾನು ಅಮೆರಿಕದಲ್ಲಿ ಇದ್ದ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ಬೇಗ ವಾಪಸ್ ಬನ್ನಿ ಕುಮಾರಸ್ವಾಮಿ. ಇಲ್ಲಿ ಆಪರೇಷನ್ ಕಮಲ ನಡೀತಿದೆ ಎಂದು ಕರೆ ಮಾಡಿದ್ದೆ ಎಂದು ಹೇಳಿದ್ದೀರಿ. ಯಾರಿಗೆ ಕರೆ ಮಾಡಿದ್ದೀರಿ? ಯಾವ ನಂಬರ್ ಗೆ ಕರೆ ಮಾಡಿದ್ದೀರಿ? ಸ್ವಲ್ಪ ಆ ನಂಬರ್ ಇದ್ದರೆ ಕೊಡುತ್ತೀರಾ?
ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ. ಇಂತ ಹಸಿಸುಳ್ಳು ಯಾಕೆ ಹೇಳುತ್ತೀರಿ? ನಿಮ್ಮ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದವರು ಮಾತ್ರ ಕರೆ ಮಾಡಿ, ಇಲ್ಲಿ ಅಂತದ್ದೇನು ಆಗುತ್ತಿಲ್ಲ ಕುಮಾರಸ್ವಾಮಿ ಅವರೇ. ನೀವು ಆರಾಮವಾಗಿ ಬನ್ನಿ ಎಂದು ಹೇಳಿದ್ದರು. ಆದರೆ, ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಅಷ್ಟೂ ಮಾಹಿತಿ ನಂಗೆ ಇರಲ್ಲ ಎನ್ನುವಷ್ಟು ಹುಂಬತನವೇ ನಿಮಗೆ?
ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ? ಯಾವಾಗ ಅಧಿಕೃತ ನಿವಾಸ ಸಿಗದೇ ಇದ್ದಾಗಲೇ ಇವರು ನನ್ನ ಸರಕಾರ ತೆಗಿತಾರೆ ಎನ್ನುವ ಅನುಮಾನ ನನಗಿತ್ತು. ಅದಕ್ಕೆ ನಾನು ಸರಕಾರದ ಕಾರನ್ನು ಕೂಡ ಬಳಕೆ ಮಾಡಿಕೊಳ್ಳಲಿಲ್ಲ. ಕೊನೆಪಕ್ಷ ಭತ್ಯೆಗಳನ್ನು ಕೂಡ ಪಡೆಯಲಿಲ್ಲ. ನಿಮ್ಮ ಶಾಸಕರು ನನ್ನ ಬಳಿ ಬಂದು ಪತ್ರಗಳನ್ನು ಹೇಗೆ ಕೊಡುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಒಬ್ಬ ಮುಖ್ಯಮಂತ್ರಿ ಮುಂದೆ ಮನವಿ ಪತ್ರಗಳನ್ನು ಬಿಸಾಡುತ್ತಿದ್ದರು. ಅದಕ್ಕೆಲ್ಲಾ ಕುಮ್ಮಕು ನೀಡಿದ್ದು ಯಾರು? ಎಂದರು.
ಎಂಟಿಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು. ಅಂತ ವ್ಯಕ್ತಿ ಬಿಜೆಪಿಗೆ ಹೋಗಿದ್ದು ಹೇಗೆ? ನಿಮಗೆ ಏನೂ ಗೊತ್ತಿಲ್ಲವೆ ಸಿದ್ದರಾಮಯ್ಯ?
ನಮ್ಮ ಪಕ್ಷದ ಶಾಸಕರು 3 ಜನ ಪಕ್ಷ ಬಿಟ್ಟು ಹೋದರು ನಿಜ. ಅದಕ್ಕೆ ಮೂಲ ಕಾರಣರು, ಅದಕ್ಕೆ ಸಿದ್ಧಸೂತ್ರಗಳನ್ನು ರೂಪಿಸಿದವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು.
ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು. ಬಡವರಿಗೆ ಸುಲುಭವಾಗಿ ನಾನು ಸಿಎಂ ಆಗಿ ಎಲ್ಲರಿಗೂ ಸಿಗುತ್ತಿದ್ದೆ. ಆದರೆ, ನೀವು ಸಿಎಂ ಆಗಿದ್ದಾಗ ಸಂಜೆ 6 ಗಂಟೆ ಮೇಲೆ ಸಿಕ್ತಾ ಇರಲಿಲ್ಲ. ಎಲ್ಲಿ ಹೋಗ್ತಾ ಇದ್ರಿ ಸಿದ್ದರಾಮಯ್ಯನವರೇ. ಗಢತ್ತಾಗಿ ಊಟ ಮಾಡಿ ನಿದ್ದೆ ಮಾಡ್ಕೊಂಡು ಇರ್ತಿದ್ರಾ, ಹೇಗೆ? ರಮೇಶ್ ಜಾರಕಿಹೊಳಿಗೂ ನನಗೂ ಭಿನ್ನಮತ ಇತ್ತಾ? ಅದು ನಿಮ್ಮ ಪಕ್ಷದಲ್ಲಿ ಶುರುವಾದ ಸಮಸ್ಯೆ. ಒಮ್ಮೆ ಶಾಸಕಾಂಗ ಪಕ್ಷ ಸಭೆ ಕರೆದು ಸರಿ ಮಾಡಬಹುದಿತ್ತು. ಹಾಗೆ ನೀವು ಮಾಡಲಿಲ್ಲ. ಸಮನ್ವಯ ಸಮತಿ ಅಧ್ಯಕ್ಷ ರಾಗಿ ನೀವು ಮಾಡಿದ್ದೇನು ಸಿದ್ದರಾಮಯ್ಯ?
ನಾನು ಜನಪರ ಕೆಲಸ ಮಾಡಲಿಲ್ಲ ಅಂತ ಹೇಳಿದ್ದೀರಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 109 ಕೋಟಿ ಕೊಟ್ಟಿದ್ದೇನೆ. ಬಡವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಷ್ಟು ಮಾಡುತ್ತಿದ್ದೇನೆ.
ನಮ್ಮ ಪಕ್ಷದ ಕೋಟದಲ್ಲೆ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದಾಗ ನೀವು ಮಾಡಿದ್ದೇನು ಎನ್ನುವುದು ನನಗೆ ಗೊತ್ತಿದೆ. ಅವರಿಬ್ಬರಿಗೆ ಅಡ್ಡಿ ಮಾಡಿದವರು ಯಾರು? ಎಂದರು.