ಬೆಳಗಾವಿ: ಬಿಜೆಪಿ ಮುಖಂಡ ಹಾಗೂ ಪೊಲೀಸ್ ಹೆಸರು ಬರೆದಿಟ್ಟು ರಮೇಶ್ ಜಾರಕಿಹೊಳಿ ಆಪ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಚ್ಚೆಯ ನೆಹರು ನಗರದಲ್ಲಿ ನಡೆದಿದೆ. ಸಾವಿಯೋ ಪಿಳೈ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಕ್ಯಾಂಪ್ ಠಾಣೆಯ ಪಿಎಸ್ಐ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಿಳೈ ಹಾಗೂ ಕ್ಯಾಂಪ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದರಂತೆ. ಮಹಿಳೆ ಹಾಗೂ ಪಿಳೈ ನಡುವೆ ಜಗಳವಾಗಿ, ಆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೃಥ್ವಿಸಿಂಗ್ 1.50 ಲಕ್ಷ ಹಣ ಪಡೆದಿದ್ದರಂತೆ. ಜೊತೆಗೆ ಇನ್ನಷ್ಟು ಹಣಕ್ಕೆ ಕಿರುಕುಳ ನೀಡಿದ್ದರಂತೆ. ಹೀಗಾಗಿ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗಿದೆ.