ಬೆಂಗಳೂರು: ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದರು. ಶಿವಾನಂದ ಪಾಟೀಲ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಇದೀಗ ಸಚಿವರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಚಿವ ಶ್ರೀ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು.
ನಾನು ಕೃಷಿಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು, ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಬರಗಾಲ ಬರಲಿ, ಸರ್ಕಾರ ಸಾಲಮನ್ನಾ ಮಾಡಲಿ ಎಂಬುದು ರೈತರ ಬಯಕೆಯಾಗಿದೆ ಎಂದು ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರೆ, ಸ್ವಪಕ್ಷದವರಿಗೇನೆ ಮುಜುಗರ ತರುವಂತ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರೋಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.