ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.14) : ಚುನಾವಣೆ ಸಂದರ್ಭದಲ್ಲಿ ಎಲ್ಲಾರೂ ಭರವಸೆ ನೀಡುತ್ತಾರೆ. ಆದರೆ ನಾನು ಸುಳ್ಳು ಭರವಸೆ ನೀಡಲ್ಲ ಜನಸೇವೆ ಜೊತೆಗೆ ನುಡಿದಂತೆ ನಾನು ನಡೆಯುವ ಮೂಲಕ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಐದು ವರ್ಷಗಳ ಕಾಲ ಜನರ ಪ್ರಮಾಣಿಕವಾಗಿ ನೂರಾರು ಕೋಟಿ ಹಣ ವನ್ನು ತಂದು ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಇಂದು ನಗರದ ಕಾಮನಬಾವಿ ಬಡಾವಣೆ ಮತ್ತು ಆಜಾದ್ ನಗರದ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 30 ರಿಂದ 40 ವರ್ಷ ಗಳಿಂದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ಖಾತೆ ಆಗಿರಲಿಲ್ಲ.ಅಂತಹ ನಗರದ ಎಲ್ಲಾ ಕೊಳಚೆ ಪ್ರದೇಶಗಳನ್ನು ಸ್ಲಂ ಬೋರ್ಡ ನಿಂದ ಘೋಷಣೆ ಮಾಡಿದ್ದೇವೆ.ಎಸ್ಸಿ ಎಸ್ಟಿ 2 ಸಾವಿರ ಮತ್ತು ಇತರೆ ಜನಾಂಗದವರಿಗೆ 3 ಸಾವಿರ ಸ್ಲಂ ಬೋರ್ಡ್‍ಗೆ ಹಣ ಕಟ್ಟಬೇಕು ಎಂದರು.
ನಾನು ಎಂದು ಸಹ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ನನ್ನ ಕ್ಷೇತ್ರಕ್ಕೆ 2630 ಮನೆಗಳನ್ನು ತಂದು ಎಲ್ಲರಿಗೂ ಮನೆ ನೀಡುವ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ 430 ಮನೆ ಸೇರಿ ಒಟ್ಟು 3060 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದ ಶಾಸಕರು ಜಲಜೀವನ್ ಮಿಷನ್ ಮೂಲಕ 560 ಕೋಟಿ ವೆಚ್ಚದಲ್ಲಿ 183 ಹಳ್ಳಿಗಳಿಗೆ ವಿ.ವಿ.ಸಾಗರದದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಇದರ ಜೊತೆಗೆ ಎಲ್ಲಾ ಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳನ್ನು ಮಾಡಿ ಮಣ್ಣು ಮುಕ್ತ ರಸ್ತೆಗಳಾಗಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಪಕ್ಷ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ಜನತೆಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಕಾಮನಬಾವಿ ಬಡಾವಣೆಯಲ್ಲಿ 450 ಮತ್ತು ಆಜಾದ್ ನಗರದಲ್ಲಿ 135 ಜನ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಇಂದು ನೀಡಿದ್ದೇನೆ. ಕಳೆದ ಹಲವು ವರ್ಷಗಳಿಂದ ನಗರದ ಬಹುತೇಕ ಜನರು ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೆ ಪರಿತಪಿಸುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಬೇಡಿಕೆ ಈಡುತ್ತಿದ್ದರು. ಇದನ್ನು ಬಿಜೆಪಿ ಮನಗಂಡು ಚುನಾವಣೆಯಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು, ಅದರಂತೆ ಇಂದು ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿದೆ. ಇದರಲ್ಲಿ ಯಾರದಾದರೂ ಹೆಸರು ಬಿಟ್ಟಿದ್ದರೆ ಪುನಃ ಸೇರಿಸಬಹುದು ಎಂದರು.
ಬುದ್ದ ನಗರ, ಅಗಳು, ಜೆ.ಜೆ.ಹಟ್ಟಿ, ಹಿಮ್ಮತ್ ನಗರ, ಚೇಳಗುಡ್ಡ, ಹಳ್ಳದ ಏರಿಯಾ, ಜಟ್‍ಪಟ್ ನಗರ, ಜೋಗಿಮಟ್ಟಿ ರೋಡ್ ಸೇರಿ ಹಲವು ಕಡೆಗಳಲ್ಲಿ ಸೇರಿ 12 ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಹಂತ ಹಂತವಾಗಿ ನೀಡಲಾಗುತ್ತಿದ್ದು ಇದರಿಂದ ಸುಮಾರು 45 ರಿಂದ 50 ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಸಭೆ ಸದಸ್ಯರಾದ ಮಂಜುಳ ವೆಂಕಟೇಶ್,ಶ್ವೇತಾ ವೀರೇಶ್, ಗೀತಾ,ಮಂಜುನಾಥ್ ಮುಖಂಡರಾದ ಮಹೇಶ್, ವೆಂಕಟೇಶ್, ರಾಮಚಂದ್ರ ಚಾರ್, ಮಂಜುನಾಥ್ ಇದ್ದರು.