ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದಿದ್ದೇನೆ : ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ : ಶ್ರೀದೇವಿ ಚಕ್ರವರ್ತಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂನ್.19 : ನಗರಸಭೆ ಉಪಾಧ್ಯಕ್ಷೆಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಾನು ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಚತೆಗೆ ಸಂಬಂಧಿಸಿದಂತೆ ಅಧಿಕಾರಿಯ ಮಾತಿಗೆ ಸಮ್ಮತಿಸಿದ್ದೇನೆ. ಆದರೆ ನನ್ನ ಹೋರಾಟದ ನಿರ್ಧಾರ, ಕಾರ್ಯ ಚಟುವಟಿಜಕೆಯಿಂದ ಹಿಂದೆ ಸರಿದಿಲ್ಲ. ಜತೆಗೆ ಯಾವುದೇ ಒತ್ತಡಕ್ಕೂ ಮಣಿದಿಲ್ಲ ಎಂದು ಶ್ರೀದೇವಿ ಚಕ್ರವರ್ತಿ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಗರದಲ್ಲಿ ಪುನರ್ಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್ ನಿಷೇಧಿಸಬೇಕು. ಅಲ್ಲದೆ, ತರಕಾರಿ ಮಾರುಕಟ್ಟೆಗಳಲ್ಲಿ ಶುಚಿತ್ವದ ಕೊರತೆ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಜೂನ್‌ 12 ರಂದು ಪೌರಾಯಕ್ತರಾದ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಜತೆಗೆ ಜೂನ್ 19 ರ ವರೆಗೆ ಗಡುವು ನೀಡಲಾಗಿತ್ತು.

ಮನವಿಗೆ ಸ್ಪಂದಿಸಿದ ಪೌರಾಯಕ್ತರು ಕಾರ್ಯಪ್ರವೃತ್ತರಾಗಿ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ. ಸೋಮವಾರ (ಜೂನ್ 16 ) ಖುದ್ದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ನಗರಸಭೆ ಸಿಬ್ಬಂದಿ ಸಹ ಸಹಕರಿಸಿದ್ದಾರೆ. ಇದೀಗ ಪೌರಾಯುಕ್ತರು ಪುನಃ ಒಂದೆರಡು ದಿವಸ ಕಾಲಾವಕಾಶ ಕೋರಿದ್ದಾರೆ.

ಕೈಚೀಲಗಳು, ಕಪ್‌ಗಳು, ಪ್ಲೇಟ್‌ಗಳು, ಆಹಾರ ಪದಾರ್ಥಗಳಿಗೆ ಪ್ಯಾಕಿಂಗ್ ಸೇರಿ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯೂ ಅತಿರೇಕಕ್ಕೆ ತಲುಪಿದೆ. ಅವುಗಳನ್ನು ಚರಂಡಿಗಳಿಗೆ ಎಸೆಯಲಾಗುತ್ತಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆಗಾಲದಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಈ ಕಾರಣಕ್ಕೆ ನಗರ ಸ್ವಚ್ಛತೆ ನನ್ನ ಆದ್ಯತೆ. ಅದಕ್ಕಾಗಿ ಯಾವುದೇ ನಿರ್ಧಾರ, ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ.
ಪೌರಾಯಕ್ತರ ಮನವಿಗೆ ಸ್ಪಂದಿಸಿ ಜೂನ್‌ 20 ರಂದು ನಗರಸಭೆ ಮುಂದೆ ನಡೆಸಬೇಕಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದಿದ್ದೇನೆ.

ಒಂದು ವೇಳೆ ನಗರಸಭೆ ಈಗ ನಡೆಸುತ್ತಿರುವ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ ಇಲ್ಲವೇ ಸ್ವಚ್ಛತಾ ಕಾರ್ಯ ನಡೆಸಿ ಪುನರ್ಬಳಸಲು ಸಾಧ್ಯವಿಲ್ಲದ ಪ್ಲಾಸ್ಟಿಕ್ ನಿಷೇಧಿಸದಿದ್ದರೆ ಅಂದಿನಿಂದಲೇ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *