ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಆ.06) : ಆತ್ಮಸಾಕ್ಷಿಗೆ ವಿರುದ್ದವಾಗಿ ನಡೆದುಕೊಂಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿಯಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಶ್ರೀಮತಿ ಎಂ.ಪ್ರೇಮಾವತಿ ಮನಗೋಳಿ ತಮ್ಮ ಅನಿಸಿಕೆ ಹಂಚಿಕೊಂಡರು.
ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಶನಿವಾರ ವಕೀಲರ ಸಂಘದಿಂದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಮೇ.15, 2020 ರಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡೆ. ಆಗ ಕೋವಿಡ್ ಇದ್ದ ಕಾರಣ ಸ್ವಲ್ಪ ಅಡಚಣೆಯಾಯಿತು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಕೆಲಸದ ಕಡೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ವಕೀಲರ ಭವನ ನವೀಕರಣಕ್ಕೆ ಪ್ರಸ್ತಾವನೆ ಹೋಗಿದೆ. ಚಿತ್ರದುರ್ಗದಲ್ಲಿಯೇ ನಿವೃತ್ತಿಯಾಗಬೇಕೆಂಬ ಆಸೆಯಿತ್ತು. ಅದು ಈಡೇರಿತು. ನನ್ನ ಅಧಿಕಾರವಧಿಯಲ್ಲಿ ವಕೀಲರ ಸಂಪೂರ್ಣ ಸಹಕಾರವು ಸಿಕ್ಕಿತು ಎಂದು ನೆನಪಿಸಿಕೊಂಡರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್.ರೇಖ ಬೀಳ್ಕೊಡುಗೆ ಹಾಗೂ ನೂತನ ನ್ಯಾಯಾಧೀಶರುಗಳ ಸ್ವಾಗತ ಸಮಾರಂಭ ಉದ್ಗಾಟಿಸಿ ಮಾತನಾಡುತ್ತ ನ್ಯಾಯಾಂಗ ಇಲಾಖೆಯಲ್ಲಿ ಯಾವುದೆ ಸಮಸ್ಯೆ, ತೊಂದರೆಯಿಲ್ಲದಂತೆ ಕೆಲಸ ಮಾಡಿ ನಿವೃತ್ತಿಯಾಗುವುದೆಂದರೆ ಕಷ್ಟ. ಶ್ರೀಮತಿ ಪ್ರೇಮಾವತಿ ಮನಗೋಳಿರವರು ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತಿದ್ದರು. ಯಾರ ತಂಟೆಗೂ ಹೋದವರಲ್ಲ. ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ, ನಿವೃತ್ತಿ ಅನಿವಾರ್ಯ. ಹಾಗಾಗಿ ನಿವೃತ್ತಿ ಜೀವನ ಪ್ರೇಮಾವತಿ ಮನಗೋಳಿರವರಿಗೆ ನೆಮ್ಮದಿಯಾಗಿರಲಿ ಎಂದು ಹಾರೈಸಿದರು.
ಅಪರ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿಯಾದ ಬಸವರಾಜ್ ಚಗರೆಡ್ಡಿರವರಿಗೂ ಬೀಳ್ಕೊಡಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್ ಬಿ.ಮಲ್ಲಾಪುರ, ಖಜಾಂಚಿ ಪ್ರದೀಪ್ ಬಿ.ಇ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು ವೇದಿಕೆಯಲ್ಲಿದ್ದರು.
ಪ್ರಧಾನ ಸಿವಿಲ್ ನ್ಯಾಧೀಶರಾದ ನೇಮಿಚಂದ್, ಅಪರ ನ್ಯಾಯಾಧೀಶರಾದ ಶ್ರೀಮತಿ ಅನಿತ ಕುಮಾರಿ, ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಸಹನ, ಒಂದನೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಚೈತ್ರ ಹಾಗೂ ನೂರಾರು ವಕೀಲರು ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದರು.