ನವದೆಹಲಿ: ನಾಳೆಯಿಂದ ರಾಷ್ಟ್ರ ರಾಜಧಾನಿಯಲ್ಲಿ G20 ಶೃಂಗ ಸಭೆ ನಡೆಯಲಿದೆ. ಈಗಾಗಲೇ ದೆಹಲಿಗೆ ಹಲವು ದೇಶಗಳ ಪ್ರಧಾನಿಗಳು ಆಗಮಿಸಿದ್ದಾರೆ. ಪ್ರಧಾನಿಗಳಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ಕೋರಿದ್ದಾರೆ.
ಇನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಶೃಂಗಸಭೆಗೆ ಆಗಮಿಸಿದ್ದಾರೆ. ಈ ವೇಳೆ ಭಾರತ ಹಾಗೂ ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ. ನಾನು ಹಿಂದೂ ಆಗಿರುವುದಕ್ಕೆ ಹೆಮ್ಮೆ ಇದೆ. ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದು ಭಾರತಕ್ಕೆ ಹೇಳುವುದು ನನ್ನ ಕೆಲಸವಲ್ಲ. ಭಾರತವೂ ಅಂತರಾಷ್ಟ್ರೀಯ ಕಾನೂನು ನಿಯಮ, ಯುಎನ್ ಚಾರ್ಟರ್ ಹಾಗೂ ಪ್ರಾದೇಶಿಕ ಸಮಗ್ರತೆಗೆ ಗೌರವದ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಸನಾತನ ಧರ್ಮದ ವಿಚಾರ ಸದ್ದು ಮಾಡುತ್ತಿರುವಾಗ ರಿಷಿ ಸುನಕ್ ಹೆಮ್ಮೆಯಿಂದ ನಾನೊಬ್ಬ ಹಿಂದೂ ಎಂದು ಹೇಳಿಕೊಂಡಿದ್ದಾರೆ. ಹಿಂದೂವಾಗಿಯೇ ಬೆಳೆದಿದ್ದೇನೆ. ಇತ್ತಿಚೆಗೆ ರಕ್ಷಾ ಬಂಧನವನ್ನು ಆಚರಿಸಿದ್ದೇನೆ. ಸಹೋದರಿಯರೆಲ್ಲಾ ರಾಖಿ ಕಟ್ಟಿದ್ದಾರೆ. ಕಾರಣಾಂತರಗಳಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲು ಆಗಿರಲಿಲ್ಲ. ಆದರೆ ಈಗ ಭಾರತದಲ್ಲಿಯೇ ಇರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಇನ್ನು ನವದೆಹಲಿ ಶೃಂಗಸಭೆಯಲ್ಲಿ ಭಾಗವಹಿಸುವ ಜಿ 20 ನಾಯಕರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಹ ಭೇಟಿ ನೀಡಲಿದ್ದಾರೆ. ಹಾಗಾಗಿ ಸಾಂಪ್ರದಾಯಿಕ ಕಿವಿಯೋಲೆಗಳು ಮತ್ತು ಆಭರಣಗಳು, ಶಾಲುಗಳನ್ನು ಪ್ರದರ್ಶಿಸಲಾಗುವುದು.