ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.05) : ಚುನಾವಣೆ ಗಿಮಿಕ್ ಮಾಡುವ ರಾಜಕಾರಣಿ ನಾನಲ್ಲ. ಮುಂದಿನ ಜನಾಂಗದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಬೆಂಗಳೂರಿನಂತ ದೊಡ್ಡ ದೊಡ್ಡ ನಗರಗಳಲ್ಲಿ ಯುವ ಜನಾಂಗ ಡ್ರಗ್ಸ್‍ನಂತ ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಡ್ಸ್‍ನಂತ ಮಾರಕ ರೋಗ ದೇಶದಲ್ಲಿ ಯಾರಿಗೂ ಬರಬಾರದು. ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರು ಭವ್ಯ ಭಾರತ ನಿರ್ಮಾಣದ ಕನಸು ಹೊತ್ತು ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆಂದು ತಿಳಿಸಿದರು.
ಜಿ-20 ಸಭೆ ಇಲ್ಲಿಯವರೆಗೂ ಮುಂದುವರೆದ ದೇಶಗಳಾದ ಅಮೇರಿಕ, ಜಪಾನ್, ರಷ್ಯ, ಜರ್ಮನ್ ರಾಷ್ಟ್ರಗಳಲ್ಲಿ ನಡೆಯುತ್ತಿತ್ತು. ಈಗ ಅದೆ ಬಲಿಷ್ಠ ದೇಶಗಳು ಜಿ-20 ಸಭೆ ಭಾರತದಲ್ಲಿ ನಡೆಯಬೇಕು ಎಂದು ಹೇಳುತ್ತಿದ್ದಾರೆಂದರೆ ಪ್ರಧಾನಿ ಮೋದಿರವರ ಶಕ್ತಿ ಏನೆಂಬುದನ್ನು ನೀವುಗಳು ಊಹಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಶಾಸಕ ಎಂ.ಚಂದ್ರಪ್ಪ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸಸಾಗರದಿಂದ ನೇರವಾಗಿ ನೀರು ತಂದು ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ನೀಡಲಾಗುವುದು. ಅದಕ್ಕಾಗಿ 367 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಹೊಳಲ್ಕೆರೆ ಸಮೀಪ ಗುಡ್ಡದಲ್ಲಿ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ನಿರ್ಮಿಸಲಾಗುವುದು. ಈಗಾಗಲೆ 200 ಕಿ.ಮೀ.ವರೆಗೆ ಪೈಪ್‍ಲೈನ್ ಅಳವಡಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಎಲ್ಲಾ ಮನೆಗಳಿಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ದೊಡ್ಡ ಓವರ್‍ಹೆಡ್ ಟ್ಯಾಂಕ್ ಕಟ್ಟಿಸಿ ಕಾಲೇಜಿಗೂ ನೇರವಾಗಿ ಶುದ್ದ ಕುಡಿಯುವ ನೀರು ನೀಡಲಾಗುವುದು. ಈ ಕಾಲೇಜನ್ನು ನ್ಯಾಕ್‍ಗೆ ಸೇರಿಸಲು ಎಲ್ಲಾ ರೀತಿಯ ಅಭಿವೃದ್ದಿ ಪಡಿಸುತ್ತೇನೆಂದು ಭರವಸೆ ನೀಡಿದರು.
ನಾಲ್ಕು ವರ್ಷಗಳಲ್ಲಿ ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಒಳಾಂಗಣ ಕ್ರೀಡಾಂಗಣ, ಈಜುಕೊಳ ಕೂಡ ನಿರ್ಮಾಣವಾಗುತ್ತಿದೆ. ಶಿವನಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಏಕಶಿಲೆಯಲ್ಲಿ ನಿರ್ಮಿಸಿರುವ ಶಿವನ ವಿಗ್ರಹವನ್ನು ಕೆರೆಯ ಮಧ್ಯೆ ಪ್ರತಿಷ್ಠಾಪಿಸಲಾಗುವುದು. ಅದಕ್ಕಾಗಿ ಚೆನ್ನೈನಿಂದ ಕ್ರೇನ್ ಬಂದಿದೆ. ನಿಮ್ಮ ಜೀವನದಲ್ಲಿಯೂ ಅಂತ ಶಿವನ ವಿಗ್ರಹವನ್ನು ನೋಡಿಲ್ಲ ಎಂದರು.
ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಬಿ.ವಿ. ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಸಜ್ಜನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಿಂಗರಾಜು, ಡಿ.ಸಿ.ಮೋಹನ್, ಚಂದ್ರಶೇಖರ್‍ನಾಯ್ಕ, ಶ್ರೀಮತಿ ಎನ್.ರೂಪಶ್ರಿ, ಹೊಳಲ್ಕೆರೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ರಮೇಶ್, ಪಿ.ಸಿ.ಹೇಮಂತ್, ತಾಲ್ಲೂಕು ವೈದ್ಯಾಧಿಕಾರಿಗಳು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.