ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಬರುವ ಆಸೆಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಅವರ ವಿರುದ್ಧದ ಕೇಸ್ ಮಾತ್ರ ಇನ್ನು ಮುಕ್ತಾಯವಾಗಿಲ್ಲ. ಇದೀಗ ಬಳ್ಳಾರಿಯಲ್ಲಿರುವ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೇಸ್ ಬೇಗ ಮುಗಿದು, ಮತ್ತೆ ರಾಜಕೀಯದ ಹಾದಿ ಸುಗಮವಾಗಲಿ ಎಂದು ಬೇಡಿಕೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ ಅವರು, ಕಳೆದ ಹದಿನಾಲ್ಕು ತಿಂಗಳಿನಿಂದ ನಾನು ಮನೆ ಹಾಗೂ ದೇವಸ್ಥಾನಕ್ಕಷ್ಟೇ ಓಡಾಡುತ್ತಿದ್ದೇನೆ. ಆದರೆ ಅಧಿಕಾರಿಗಳು ಪದೇ ಪದೇ ನನಗೆ ಕಿರುಕುಳ ಕೊಡುತ್ತಾ ಇದ್ದಾರೆ. ಬಳ್ಳಾರಿಯಲ್ಲಿ ನಾನು ಬದುಕಿದರೆ ಸಾಕು ಎನಿಸುತ್ತದೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಇರುವುದಕ್ಕೆ ನಾನು ಕೋರ್ಟ್ ನ ಅನುಮತಿ ಕೇಳಿದ್ದೇನೆ. ಕಳೆದ 12 ವರ್ಷಗಳಿಂದ ನನ್ನ ಮೇಲಿನ ಕೇಸ್ ನಡೆಯುತ್ತಿದೆ. ಕೇಸ್ ನಡೆಯುವಾಗ ನಾನು ಬಳ್ಳಾರಿಯಲ್ಲಿ ಇರಬಾರದು ಎಂದು ಸಿಬಿಐನವರು ಹೇಳಿದ್ದಾರೆ. ಹೀಗಾಗಿ ನಾನು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರತಿ ದಿನ ಕೇಸ್ ನಡೆಸುವಂತೆ ಕೇಳಿದ್ದೇನೆ.
ಒಂದು ತಪ್ಪು ಕೇಸನ್ನು ನನ್ನ ಮೇಲೆ ಹಾಕಿದ್ದಾರೆ. ಸೋಲುವ ಭಯದಲ್ಲಿ ಕೇಸ್ ನಡೆಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೇಸ್ ವಿಳಂಬವಾಗುತ್ತಿರುವ ಹಿನ್ನೆಲೆ ತಾಯಿಯನ್ನು ಬೇಡಿಕೊಂಡಿದ್ದೇನೆ. ವಿಶೇಷ ಪೂಜೆ ಮಾಡಿಸಿ, ಅನ್ನ ಸಂತರ್ಪಣೆ ಮಾಡುತ್ತೀನಿ ಎಂದು ಬೇಡಿಕೊಂಡಿದ್ದೇನೆ ಎಂದಿದ್ದಾರೆ.