ಜನ ಮೆಚ್ಚುವ ರೀತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದೇನೆ : ಶಾಸಕ ಎಂ.ಚಂದ್ರಪ್ಪ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಡಿ.26): ಪ್ರಧಾನಿ ನೆರೇಂದ್ರಮೋದಿರವರ ಕನಸಿನಂತೆ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಒಂದು ಕೋಟಿ ಎಪ್ಪತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಹೋಬಳಿಯ ಸಿರಿಗೆರೆ ಗ್ರಾಮದಲ್ಲಿ 5.60 ಕೋಟಿ ರೂ.ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‍ಲೈನ್ ಮತ್ತು ಸಿರಿಗೆರೆ ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.

ಸಿರಿಗೆರೆ ಸರ್ಕಲ್ ಸಂತೆಬೆನ್ನೂರು, ಸಿರಿಗೆರೆ ಮುಖಾಂತರ ಮಠದ ರಸ್ತೆ ಸೇರಿ ಸಾಸಲು ಸಂತೆಬೆನ್ನೂರು ರಸ್ತೆವರೆಗೆ 105 ಕೋಟಿ ರೂ.ಗಳನ್ನು ನೀಡಿದ್ದೇನೆ. ಒಂದುವರೆ ಅಡಿ ಎತ್ತರ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದೆ. ಮೊದಲ ಬಾರಿ ನಾನು ಶಾಸಕನಾಗಿದ್ದ ಭರಮಸಾಗರದ ವ್ಯಾಪ್ತಿಗೆ ಸೇರಿದ 386 ಹಳ್ಳಿಗಳಿಗೆ ಟಾರ್ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೆ ಮತ್ತೆ ಗೆಲ್ಲಿಸಿದರು. ಆ ಕಾರಣಕ್ಕಾಗಿ ಅಧಿಕಾರ ಇರಲಿ ಬಿಡಲಿ, ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಒಳ್ಳೆಯ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದೇನೆಂದು ಹೇಳಿದರು.

ಅಜ್ಜಪ್ಪನಹಳ್ಳಿಗೆ ನೇರವಾಗಿ ಜೋಗ್‍ಫಾಲ್ಸ್‍ನಿಂದ 220 ಮೆ.ವ್ಯಾ.ವಿದ್ಯುತ್ ಪೂರೈಕೆಗಾಗಿ 250 ಕೋಟಿ ರೂ.ಗಳನ್ನು ನೀಡಿದ್ದೇನೆ. ಅಲ್ಲಿಂದ ಸಿರಿಗೆರೆ, ವಿಜಾಪುರ, ಭರಮಸಾಗರ, ಕೋಗುಂಡೆ ಸಬ್‍ಸ್ಟೇಷನ್‍ಗಳಿಗೆ ಕರೆಂಟ್ ಸರಬರಾಜಾಗಲಿದೆ. ವಿದ್ಯುತ್, ನೀರಿಗೆ ಸಮಸ್ಯೆಯಾಗಬಾರದೆಂದು 250 ರಿಂದ 300 ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ.

ಎಲ್ಲಾ ಕಡೆ ನೀರು ಹುಕ್ಕಿ ಹರಿಯುತ್ತಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು. 493 ಹಳ್ಳಿಗಳ ಅಭಿವೃದ್ದಿಗೆ ಹಣ ನೀಡಿದ್ದೇನೆ. ಹತ್ತು ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿ ಮೇಲ್ದರ್ಜೆಗೇರಿಸುವ ಮೂಲಕ ವೈದ್ಯರುಗಳು ಇಲ್ಲಿಯೇ ತಂಗುವಂತೆ ಮಾಡಲಾಗುವುದು.

ಪೂಜ್ಯರ ಆಶೀರ್ವಾದದಿಂದ ಹೊಳಲ್ಕೆರೆ ಕ್ಷೇತ್ರಾದ್ಯಂತ ಅಭಿವೃದ್ದಿ ಕೈಗೊಂಡು ಸಮಾಜದ ಋಣ ತೀರಿಸುವ ಕೆಲಸ ಮಾಡುವುದು ನನ್ನ ಧ್ಯೇಯ. ಎಕ್ಸ್‍ಪ್ರೆಸ್ ಬಸ್‍ಗಳು ಇಲ್ಲಿ ನಿಲ್ಲುವುದಿಲ್ಲ. ಗಂಟೆಗೊಂದು ಸೆಟ್ಲ್ ಬಸ್‍ಗಳನ್ನು ನಿಲ್ಲಿಸಿ ಗ್ರಾಮೀಣ ಪ್ರದೇಶದ ಜನರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ದೇವರಾಜ್, ಮಾಜಿ ಅಧ್ಯಕ್ಷ ಮೋಹನ್, ಉಪಾಧ್ಯಕ್ಷೆ ಶ್ರೀಮತಿ ಮಂಜುಳ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಶೋಭ, ಶ್ರೀಮತಿ ನಿರ್ಮಲ, ಶ್ರೀಮತಿ ದೇವಿಕಾ, ನಾಗರಾಜ್, ಸಿದ್ದೇಶ್, ಗ್ರಾಮದ ಹಿರಿಯ ಮುಖಂಡ ಮಂಜುನಾಥ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *