ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್.19 : ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಇನ್ನು ಜೀವಂತವಾಗಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ನಾನೂ ಕೂಡ ಸ್ಪರ್ಧಿಸುವ ಇಚ್ಚೆಯಿಟ್ಟುಕೊಂಡಿದ್ದೇನೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ ನೇರಲಗುಂಟೆ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾವೇರಿ, ಮೈಸೂರು ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ. ಘೋಷಿಸಿದ್ದನ್ನು ಬಿಟ್ಟರೆ ಇದುವರೆವಿಗೂ ನಯಾಪೈಸೆಯನ್ನು ಬಿಡುಗಡೆಗೊಳಿಸಿಲ್ಲ. ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ನೆನೆಗುದಿಗೆ ಬಿದ್ದಿದೆ. ಸರ್ವೆ ಕಾರ್ಯ ಮುಗಿದಿದ್ದು, ಹಿರಿಯೂರು ಭಾಗದಲ್ಲಿ ಮಾತ್ರ ಸ್ವಲ್ಪ ಸರ್ವೆ ಆಗಬೇಕಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಮಂತ್ರಿಯಾಗಿರುವ ಎ.ನಾರಾಯಣಸ್ವಾಮಿಯಿಂದ ಜಿಲ್ಲೆಗೆ ಏನು ಕೊಡುಗೆ ಎಂದು ಪ್ರಶ್ನಿಸಿದರು ?
ನೀರಾವರಿಯಿಂದ ವಂಚಿತವಾಗಿರುವ ಜಿಲ್ಲೆಯಲ್ಲಿ ಕೈಗಾರಿಕೆಗಳೆ ಇಲ್ಲ. ದೇಶದ ಪ್ರಧಾನಿ ನರೇಂದ್ರಮೋದಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟರು. ಆದರೆ ಇರುವ ಉದ್ಯೋಗವು ಕೈತಪ್ಪಿ ಹೋಗುತ್ತಿದೆ. ಸಿ.ಎಸ್.ಆರ್.ಫಂಡ್ ಎಲ್ಲಿ ಹೋಗುತ್ತಿದೆ ಎನ್ನವುದೇ ಗೊತ್ತಾಗುತ್ತಿಲ್ಲ. ಕೇಂದ್ರ ಅನುದಾನ ಬಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯಕ್ಕೆ ಅನುಕೂಲವಾಗಲಿದೆ. ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಕೂಡ ಜಿಲ್ಲೆಗೆ ತರಬಹುದು. ಇದರಿಂದ ರಾಜ್ಯದ ಅನೇಕ ಭಾಗಗಳಿಗೆ ಅನುಕೂಲವಾಗಲಿದೆ. ಐ.ಎ.ಎಸ್. ಐ.ಪಿ.ಎಸ್. ಕೆ.ಎ.ಎಸ್.ನಲ್ಲಿ ಜಿಲ್ಲೆಯಿಂದ ತೇರ್ಗಡೆಯಾಗುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ಬರಪೀಡಿತ ಪ್ರದೇಶಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಆಸೆಯಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ.
ಕಳೆದ ಸಾರಿ ಪಕ್ಷ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡಿತ್ತು. ಆದರೆ ಪರಾಭವಗೊಂಡೆ ಎಂದು ಹೇಳಿದರು. ಇಂಧನ ಸಚಿವರಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾವಗಡ ಬಳಿ ಎರಡು ಸಾವಿರ ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ ಮಾಡದೆ ಹೋಗಿದ್ದರೆ ಆ ಭಾಗದ ರೈತರು ಉಳಿಯುತ್ತಿರಲಿಲ್ಲ. ಈಗಿನ ಇಂಧನ ಸಚಿವ ಕೆ.ಜೆ.ಜಾರ್ಜ್ 1200 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ತೀರ್ಮಾನಿಸಿದ್ದಾರೆ. ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಸೌರ ವಿದ್ಯುತ್ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯ ಮೊಳಕಾಲ್ಮುರು ಅತ್ಯಂತ ಹಿಂದುಳಿದ ಪ್ರದೇಶ ಅಲ್ಲಿಗೆ ಕೈಗಾರಿಕೆಗಳನ್ನು ತರುವ ಆಸೆಯಿದೆ. ಅದಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸುವ ಗುರಿಯಿಟ್ಟುಕೊಂಡಿದ್ದೇನೆ. ಪಕ್ಷದ ವರಿಷ್ಠರು ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್ ನವಾಜ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧಾ ಪತ್ರಿಕಾಗೋಷ್ಠಿಯಲ್ಲಿದ್ದರು.