ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 13 : ತಾಲ್ಲೂಕಿನ ಶ್ರೀ ಕ್ಷೇತ್ರ ವದ್ದಿಕೆರೆ ಶ್ರೀ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರ ಸ್ವಾಮಿಯ ಹುಂಡಿ ಹಣ ಎಣಿಕೆ ನಡೆದಿದೆ. ಈ ಬಾರಿ ಹುಂಡಿಯಲ್ಲಿ 96,32,630 ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಹುಂಡಿ ಹಣ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಧಿಸೂಚಿತ “ಎ” ಪ್ರವರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ಯಾನೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್ ಸಮ್ಮುಖದಲ್ಲಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗಳ ಹಣವನ್ನು ಎಣಿಕೆ ಮಾಡಲಾಗಿದೆ.
ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ತೆರೆದಿರುವ ಉಳಿತಾಯ ಖಾತೆಗಳಲ್ಲಿ ಇಡಲಾಗಿದೆ. ಕಳೆದ 2023, ಸೆಪ್ಟೆಂಬರ್ 27ರಂದು ರಂದು ಎಣಿಕೆ ನಡೆದಿತ್ತು. ಪ್ರಥಮ ಬಾರಿಗೆ ದಾಖಲೆ ಮೊತ್ತದ ಒಂದು ಕೋಟಿ 24 ಲಕ್ಷದ 67 ಸಾವಿರದ 800 ರೂಪಾಯಿ ಹಣ, ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಅಂದಿನ ಎಣಿಕೆಯ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು ಸೇರಿದಂತೆ, ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಬಂಗಾರ ಮತ್ತು ಬೆಳ್ಳಿ ಆಭರಣಗಳು ಸಹ ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿತವಾಗಿದ್ದವು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಹಿರಿಯೂರು ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ವದ್ದಿಕೆರೆ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.