ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಆ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಎರಡನೇ ಬಾರಿಗೆ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ವೀಣಾ ಭರದ್ವಾಡ ಮೇಯರ್ ಆಗಿ ಆಯ್ಕೆಯಾಗಿದ್ರೆ, ಸತೀಶ್ ಹಾನಗಲ್ ಉಪಮೇಯರ್ ಆಯ್ಕೆ ಆಗಿದ್ದಾರೆ.
ಈ ಬಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ನಡೆಸಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಜಗದೀಶ್ ಶೆಟ್ಟರ್ ಗೆ ಈ ಹೊಸ ಟಾಸ್ಕ್ ನೀಡಿದ್ದರು. ಆದರೂ ಪಾಲಿಕೆಯಲ್ಲಿ ಗೆಲುವು ಸಾಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಕಾಂಗ್ರೆಸ್ ಪಕ್ಷ ಬಿಜೆಪಿ ಸದಸ್ಯರಿಗೆ ಆಸೆ, ಆಮಿಷಗಳನ್ನು ಒಡ್ಡಬಹುದು ಎಂದು ಬಿಜೆಪಿ ತನ್ನೆಲ್ಲ ಪಾಲಿಕೆ ಸದಸ್ಯರನ್ನು ದಾಂಡೇಲಿ ರೆಸಾರ್ಟ್‌ಗೆ ಶಿಫ್ಟ್ ಮಾಡಿತ್ತು. ಚುನಾವಣೆ ದಿನವೇ ಅವರನ್ನು ದಾಂಡೇಲಿಯಿಂದ ನೇರವಾಗಿ ಧಾರವಾಡದ ಮಂದಾರ ಹೋಟೆಲ್‌ಗೆ ಕರೆತಂದು ಅಲ್ಲಿಂದ ನೇರವಾಗಿ ಪಾಲಿಕೆಗೆ ಕರೆತಂದಿತು. ಬಿಜೆಪಿ ಪಕ್ಷದ ಸದಸ್ಯರು ಅಡ್ಡ ಮತದಾನ ಮಾಡದಂತೆ ಅವರಿಗೆ ವಿಪ್ ಕೂಡ ಜಾರಿ ಮಾಡಲಾಗಿತ್ತು.