ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 22 : ಬೆಳಗಾವಿಯಲ್ಲಿ ಮರಾಠಿ ಪುಂಡರ ಉಪಟಳ ವಿರೋಧಿಸಿ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಚಿತ್ರದುರ್ಗದಲ್ಲಿ ಬಂದ್‍ಗೆ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ಅಂಗಡಿ ಮುಂಗಟ್ಟು ತೆರೆದಿದ್ದು, ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯಿತು.

ಬಸ್, ಆಟೋಗಳು ಮಾಮೂಲಿನಂತೆ ಸಂಚರಿಸಿದವು. ಶಾಲೆ-ಕಾಲೇಜುಗಳಿಗೆ ಮಕ್ಕಳು ನಿರ್ಭಯವಾಗಿ ಹೋಗುತ್ತಿದ್ದುದು ಕಂಡು ಬಂದಿತು. ಬೆಳಗಿನಿಂದಲೆ ಗಾಂಧಿ ವೃತ್ತ, ಒನಕೆ ಓಬವ್ವ ಸರ್ಕಲ್ ಹಾಗೂ ಎಸ್.ಬಿ.ಎಂ.ವೃತ್ತದಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು. ಪ್ರತಿಭಟನಾಕಾರರು ಎಲ್ಲಿಯೂ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲಿಲ್ಲ.

ಕರವೆ ಪ್ರತಿಭಟನೆ : ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡ ಬಣದ ಕಾರ್ಯಕರ್ತರು ಗಾಂಧಿ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಿಸಿ ಬೆಳಗಾವಿಯಲ್ಲಿ ಮರಾಠರ ಪುಂಡಾಟಿಕೆ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೆ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠರು ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ ನಿಲ್ಲಬೇಕು. ರಾಜ್ಯದ ಜನತೆಯ ಒಳಿತಿಗಾಗಿ ನಾವುಗಳು ಪ್ರತಿಭಟನೆಗೆ ಇಳಿದಿದ್ದೇವೆ. ಎಂ.ಇ.ಎಸ್. ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದಿತೆಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಬೆಳಗಾವಿಯಲ್ಲಿ ನಮ್ಮ ರಾಜಕಾರಣಿಗಳು ಮತ ಓಲೈಕೆಗಾಗಿ ಮರಾಠರ ಉಪಟಳಕ್ಕೆ ಕಡಿವಾಣ ಹಾಕದಿರುವುದು ನಾಚಿಕೆಗೇಡಿನ ಸಂಗತಿ. ಬೆಳಗಾವಿ ನಮ್ಮದು ಒಂದಿಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಕರ್ನಾಟಕದ ರಾಜಕಾರಣಿಗಳು ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಮೈಗೂಡಿಸಿಕೊಂಡು ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಕೆ.ಆರ್.ಮಂಜುನಾಥ್ ಒತ್ತಾಯಿಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಹೆಚ್.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ.ಜಿ.ಗೋವಿಂದರಾಜು, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ಓಬಣ್ಣಗೌಡ, ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್‍ನಾಯ್ಕ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

