ಬೆಂಗಳೂರು: ಸ್ಪಂದನಾ ಮೃತದೇಹ ಬ್ಯಾಂಕಾಕ್ ನಿಂದ ನಿನ್ನೆ ರಾತ್ರಿಯೇ ಬಂದಿದೆ. ಮಧ್ಯರಾತ್ರಿಯಿಂದಾನೇ ಮಲ್ಲೇಶ್ವರಂನಲ್ಲಿರುವ ತಂದೆ ಬಿಕೆ ಶಿವರಾಮ್ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಿರಿಯ ನಟ, ನಟಿಯರು, ರಾಜಕೀಯ ನಾಯಕರು, ಆಪ್ತರು, ಸಂಬಂಧಿಕರು, ಅಭಿಮಾನಿಗಳೆಲ್ಲಾ ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ. ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ರಾಘು, ಅಪ್ಪು ಎಲ್ಲಾ ನಮ್ಮ ಮನೆಯಲ್ಲಿಯೇ ಬೆಳೆದವರು. ಚಿಕ್ಕವರೇ ಬೇಗ ಹೋಗಿಬಿಡುತ್ತಾರೆ. ಇಂಥ ಸಮಯದಲ್ಲಿ ಏನು ಹೇಳಬೇಕು ಗೊತ್ತಾಗಲ್ಲ. ಮಗಳು ಇನ್ನಿಲ್ಲ ಅಂಥ ತಂದೆಗೆ ಹೇಳೋದಾ, ಹೆಂಡತಿ ಇನ್ನಿಲ್ಲ ಅಂತ ರಾಘುಗೆ ಸಮಾಧಾನ ಮಾಡುವುದು ಎಂದು ತಿಳಿತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಗಿರಿಜಾ ಲೋಕೇಶ್ ಮಾತನಾಡಿ, ಸ್ಪಂದನಾ ಮುಖದಲ್ಲಿ ಒಂದಿಷ್ಟು ಕಳೆಮಾಸಿಲ್ಲ. ಇನ್ನು ಬದುಕಿದ್ದಾಳೆ ಅಂತಾನೆ ಅನ್ನಿಸುತ್ತೆ. ದೇವರು ಅದೆಷ್ಟು ಕ್ರೂರಿ. ಒಂದು ಸುಂದರ ಸಂಸಾರವನ್ನು ಹಾಳು ಮಾಡಿಬಿಟ್ಟ ಎಂದು ನೋವು ಮಾಡಿಕೊಂಡಿದ್ದಾರೆ.
ಹಿರಿಯ ನಟ ಶ್ರೀನಾಥ್ ಮಾತನಾಡಿ, ಆ ಮಗು ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ರಾಘುಗೆ ದುಃಖ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.