ಭೂಮಿಯ ಉಗಮ ಹೇಗಾಯಿತು : ಜೆ. ಪರಶುರಾಮ ಅವರ ವಿಶೇಷ ಲೇಖನ

4 Min Read

ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
94483 38821

ಸುದ್ದಿಒನ್ :
ನಮ್ಮ ಭೂಮಿಯ ದಿನದ ಆಚರಣೆಯನ್ನು ಪ್ರತಿವರ್ಷ ಏಪ್ರಿಲ್‌-22 ರಂದು ಆಚರಿಸಲಾಗುವುದು. ಇದರ ಪ್ರಾರಂಭವನ್ನು 22-ಏಪ್ರಿಲ್‌-1970 ರಿಂದ ಪ್ರಪಂಚದಾದ್ಯಂತ ಆಚರಿಸುವುದು ಪ್ರಾರಂಭಿಸಲಾಗಿದೆ. ಇದರ ಸಂಕೇತ ಭೂಮಿಯ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂಕೇತದಿಂದ ಭೂಮಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.

ವಿಶ್ವದ ಅನಂತ ವಿಸ್ತಾರದಲ್ಲಿ ಭೂಮಿ ಸಾಸುವೆ ಕಾಳಿನಷ್ಟು ಸಣ್ಣದು. ಸೌರವ್ಯೂಹದಲ್ಲಿ (Solar System) ಸೂರ್ಯನೇ ಅಧಿಪತಿ. ಉಳಿದ ಆಕಾಶಕಾಯಗಳು ಸೂರ್ಯನಿಗೆ ಅಧೀನ ಗ್ರಹ, ಉಪಗ್ರಹ, ಕ್ಷುದ್ರಗ್ರಹ‌(Asteroids), ಧೂಮಕೇತು (Comets) ಮತ್ತು ಉಲ್ಕೆಗಳು (Meteorites) ಸೌರವ್ಯೂಹದ ಸದಸ್ಯರು. ಸೂರ್ಯನ ಗುರುತ್ವ ಶಕ್ತಿಗೆ ಮಣಿದು ಇವು ಪ್ರದಕ್ಷಿಣೆ ಹಾಕುತ್ತಿವೆ. ಸೂರ್ಯನಿರುವ ಸ್ಥಳೀಯ ಬ್ರಹ್ಮಾಂಡವೇ ಆಕಾಶ ಗಂಗೆ (Milk way) ಆಕಾಶಗಂಗೆಯ ವಿಸ್ತಾರ ಸಾಧಾರಣ ಕಲ್ಪನೆಗೆ ನಿಲುಕದು. ಅದರಲ್ಲಿ ನಮ್ಮ ಸೂರ್ಯನಂತಿರುವ ಇಪ್ಪತ್ತು ಸಾವಿರ ಕೋಟಿ ಸೂರ್ಯರಿದ್ದಾರೆ. ಆಕಾಶಗಂಗೆಯ ಉದ್ದ ಒಂದು ಲಕ್ಷ ಜ್ಯೋತಿರ್ವರ್ಷಗಳು (Light years). ಬೆಳಕು ಒಂದು ಸೆಕೆಂಡಿಗೆ ಮೂರು ಲಕ್ಷ ಕಿಲೋ ಮೀಟರು ವೇಗದಲ್ಲಿ ಪ್ರವಹಿಸಿದರೆ ಒಂದು ಕೊನೆಯಿಂದ ಮತ್ತೊಂದು ಕೊನೆ ಮುಟ್ಟಲು ಒಂದು ಲಕ್ಷ ವರ್ಷಗಳು ಬೇಕು. ವಿಶ್ವದಲ್ಲಿ ಭೂಮಿಯ ಸ್ಥಾನವಂತಿರಲಿ ನಮ್ಮ ಸೌರವ್ಯೂಹದ ಸ್ಥಾನವೇ ಗೌಣ. ಆಕಾಶಗಂಗೆಯ ಕೇಂದ್ರ ಭಾಗದಿಂದ ನಮ್ಮ ಸೌರವ್ಯೂಹ 30,000 ಜ್ಯೋತಿರ್ವರ್ಷಗಳಷ್ಟು ದೂರವಿದೆ.

ವಿಶ್ವ, ಆದಿಯಲ್ಲಿ ಕೇವಲ ಹೈಡ್ರೋಜನ್‌ ಅನಿಲದ ಒಂದು ಮಹಾರಾಶಿ. ಆಕ್ಸಿಜನ್‌ ಆಗಲಿ, ಕಾರ್ಬನ್‌ ಆಗಲಿ ಅಸ್ತಿತ್ವದಲ್ಲಿರಲಿಲ್ಲ. ಈ ಅದಿ ವಿಶ್ವವನ್ನು ವಿಜ್ಞಾನಿಗಳು ಅಂಡ ವಿಶ್ವವೆಂದಿದ್ದಾರೆ ( Cosmic engg). ಅಂಡವಿಶ್ವ ತನ್ನ ಒಡಲಿನಲ್ಲಿ ಮೂಲ ಕಣಗಳ ದಟ್ಟ ರಾಶಿಯನ್ನೇ ಹೊಂದಿತ್ತು. ಪ್ರೋಟಾನ್‌, ನ್ಯೂಟ್ರಾನ್‌, ಎಲೆಕ್ಟ್ರಾನ್‌ಗಳ ದಟ್ಟ ರಾಶಿ ಅದರಲ್ಲಿ ಅಡಕಗೊಂಡಿತ್ತು. ಈ ಅಪಾರ ರಾಶಿ ಆವರ್ತನೆಗೊಳಗಾಗಿ, ದಟ್ಟೈಸಿ ತನ್ನ ಸಾಂದ್ರತೆಗೆ ತಾನೇ ಕುಸಿಯಲು ಪ್ರಾರಂಭಿಸಿತು. ದಟ್ಟ ವಸ್ತುಗಳು ಕೇಂದ್ರದೆಡೆಗೆ ಸೆಳೆತಗೊಂಡವು. ಆವರ್ತನೆ ಮತ್ತಷ್ಟು ಹೆಚ್ಚಿತು. ತಿರುಳಿನಲ್ಲಿ ಗಾಢ ಘರ್ಷಣೆ ಹುಟ್ಟಿತು. ಇದರೊಡನೆ ಮೈದಳೆದ ಅಪರಿಮಿತಿ ಉಷ್ಣತೆ ಅಂಡವಿಶ್ವವನ್ನು ಸ್ಫೋಟಿಸಿತು. 1948ರಲ್ಲಿ ಪ್ರಸಿದ್ಧ ವಿಜ್ಞಾನಿ ಜಾರ್ಜ್‌ ಗ್ಯಾಮೋವ್‌, ವಿಶ್ವದ ಉಗಮಕ್ಕೆ ಮೂಲವಾದ ಈ ವಿದ್ಯಮಾನವನ್ನು “ಬಿಗ್‌ ಬ್ಯಾಂಗ್‌” (Big bang) ಎಂದು ಕರೆದ. “ಬಿಗ್‌ ಬ್ಯಾಂಗ್” ಎಂದರೆ ಮಹಾ ಭಾಜಣೆ ಎನ್ನಬಹುದು. ಅಂಡವಿಶ್ವ ಸ್ಫೋಟಿಸಿ 1,500 ಕೋಟಿ ವರ್ಷಗಳೇ ಸಂದಿವೆ. ಈ ಸ್ಫೋಟ ಸಂಭವಿಸಿದಾಗ ಮೈದಳೆದ ತಾಪ ಅಸಾಧಾರಣವಾದುದು. ಸ್ಫೋಟನೆಯಾದ ಒಂದು ಸೆಕೆಂಡಿನ ತರುವಾಯ ತಾಪ 1500 ಕೋಟಿ ಡಿಗ್ರಿ ಕೆಲ್ವಿನ್‌ಗೆ ಏರಿತ್ತು. 700 ಸೆಕೆಂಡುಗಳ ತರುವಾಯ ಅದು 50 ಕೋಟಿ ಡಿಗ್ರಿ ಕೆಲ್ವಿನ್‌ಗೆ ಇಳಿಯಿತು.

ಅಂಡ ವಿಶ್ವ ಸ್ಫೋಟಿಸಿದಾಗ ನೀಹಾರಿಕೆಗಳು (Nebula) ಮೈದಳೆದುವು. ಪ್ರತಿ ನೀಹಾರಿಕೆಯ ದ್ರವ್ಯರಾಶಿ ಹೆಚ್ಚಿದಂತೆ ಗುರುತ್ವಾಕರ್ಷಣೆಯೂ ಹೆಚ್ಚಿತು. ಜೊತೆಗೆ ಒಳ ಸೆಳೆತವೂ ಪ್ರಾರಂಭವಾಯಿತು. ಇದು ಪರಮಾಣು ಕ್ರಿಯೆಗೆ ಪ್ರಚೋದಿಸಿತು. ನೀಹಾರಿಕೆಯಲ್ಲಿ ತಾರೆಗಳು ಹುಟ್ಟಿದುವು. ಹೈಡ್ರೋಜನ್‌, ಅಪಾರ ಒತ್ತಡದಲ್ಲಿ ಹೀಲಿಯಮ್‌ ಆಗಿ ಪರಿವರ್ತನೆಯಾಯಿತು. ಅದರ ಪರಿಣಾಮವೇ ಶಕ್ತಿಯ ಉತ್ಸರ್ಜನೆ. ಆದಿಮ ತಾರೆ ಸಂಪೂರ್ಣವಾಗಿ ಬೆಳಗುವ ಸೂರ್ಯನಾಗಿ ಪರಿವರ್ತನೆ ಹೊಂದಿತು.

ಇಂದು ನಮ್ಮ ಸೂರ್ಯನ ವಿಕಾಸದ ವೃತ್ತಾಂತವೂ ಹೌದು. ಆದಿಮ ಸೂರ್ಯನನ್ನು ಆವರಿಸಿದ್ದ ಅನಿಲ, ಧೂಳಿನ ರಾಶಿ ಎಲ್ಲಿ ಹೋಯಿತು? ಈ ಪ್ರಶ್ನೆಗೆ ಉತ್ತರಿಸಲು ವಿಜ್ಞಾನಿಗಳು ಮತ್ತೊಂದು ಸಿದ್ಧಾಂತವನ್ನು ಊಹಿಸಿದ್ದಾರೆ. ನಮ್ಮ ಸೌರವ್ಯೂಹದ ಎಲ್ಲ ಗ್ರಹಗಳ ವೃತ್ತಾಂಶವನ್ನು ದೀರ್ಘವಾಗಿ ಅಧ್ಯಯನ ಮಾಡಿದ್ದಾರೆ. ಪ್ರಾರಂಭದ ಸ್ಥಿತಿಯಲ್ಲಿ ಅದಿಮ ಸೂರ್ಯನನ್ನು ಆವರಿಸಿದ ಅನಿಲರಾಶಿ ಅಪಾರ ಉಷ್ಣತೆಯಿಒದ ಬೇಯಿತ್ತಿತ್ತು. ಆಗ ವಸ್ತುವಿನ ಸ್ಥಿತಿ ಅನಿಲ ರೂಪದಲ್ಲಿತ್ತು. ಅನಿಲ ಸಂಕೋಚಿಸಿ ಸಾವಧಾನವಾಗಿ ಅದರಿಂದ ಗ್ರಹಾಂಶಗಳು (Planetisimals) ಕಾಣಿಸಿಕೊಂಡುವು. ಸೂರ್ಯನಿಗೆ ತುಂಬ ಸಮೀಪವಿರುವ ಬುಧಗ್ರಹ ಅತ್ಯಂತ ಸಾಂದ್ರ (ನೀರಿಗಿಂತ 5.4 ಪಟ್ಟು ಅಧಿಕ ಸಾಂದ್ರ), ಏಕೆಂದರೆ ಬುಧಗ್ರಹದಲ್ಲಿ ಹೆಚ್ಚು ಕಬ್ಬಿಣಾಂಶವಿದೆ.

ಸೂರ್ಯನಿಗಿಂತ ದೂರವಿರುವ ಇತರ ಗ್ರಹಗಳಲ್ಲಿ ಹಗುರ ಧಾತುಗಳೇ ಪ್ರಧಾನವಾಗಿವೆ. ಮೆಗ್ನೀಸಿಯಮ್, ಸಿಲಿಕ, ಆಕ್ಸಿಜನ್‌ ಘನೀಕರಿಸಲು ಸಾಧಾರಣ ಉಷ್ಣತೆ ಸಾಕು. ಭೂಮಯನ್ನುಳಿದು ಇತರ ಗ್ರಹಗಳೂ ರೂಪುಗೊಳ್ಳುವಾಗ ನೀರು, ಮೀಥೇನ್‌, ಅಮೋನಿಯಗಳನ್ನು ವಾತಾವರಣಕ್ಕೆ ಬಿಟ್ಟುಕೊಟ್ಟುವು.

ಯಾವ ಕಾಯದಲ್ಲಿ ನ್ಯೂಕ್ಲಿಯರ್‌ ಕ್ರಿಯೆಗೆ (Nuclear reaction) ಬೇಕಾದ ಉಷ್ಣೆತೆ ದೊರೆಯಿತೋ ಅದು ತಾರೆಯಾಗಿ ವಿಕಾಸವಾಯಿತು. ಆ ಉಷ್ಣತೆ ತಲುಪದ ಕಾಯಗಳು ಗ್ರಹವಾಗಿ ಮಾತ್ರ ರೂಪುಗೊಳ್ಳಲು ಸಾಧ್ಯವಾಯಿತು. ಉಪಗ್ರಹಗಳೂ ಕೂಡ ಹುಟ್ಟಿದ್ದು ಹೀಗೆಯೇ. ಸಾಂದ್ರಿಕರಣಗೊಂಡು ಗ್ರಹಗಳ ಸುತ್ತ ಪರಿಭ್ರಮಿಸುತ್ತಲೇ ಅವು ಬಂಧಿಯಾದವು. ಸೌರವ್ಯೂಹದಲ್ಲಿ 30ಕ್ಕೂ ಮಿಕ್ಕು ಚಂದ್ರಮರಿದ್ದಾರೆ.

ಅಂಡವಿಶ್ವ ಸ್ಫೋಟಿಸಿದ ಕಾಲಕ್ಕೂ ಸೌರವ್ಯೂಹದ ಗ್ರಹಗಳು ಹುಟ್ಟಿದ ಕಾಲಕ್ಕೂ ನಡುವೆ ಕೊನೆಯ ಪಕ್ಷ ಒಂದು ಸಾವಿರ ಕೋಟಿ ವರ್ಷಗಳ ಅಂತರವಿದೆ. ಸೌರವ್ಯೂಹದ ಎಲ್ಲ ಸದಸ್ಯ ಗ್ರಹಗಳ ಉಗಮವೂ ಒಂದೇ ಮೂಲದಿಂದ ಸುಮಾರು ಒಂದೇ ಕಾಲಕ್ಕೆ ಆಗಿದೆ.

ಕಬ್ಬಿಣ ಭಾರವಾದುದರಿಂದ ಅದು ಭೂಗರ್ಭಕ್ಕೆ ಇಳಿದು ನಿಕ್ಕಲಿನೊಡನೆ ಬೆರೆತು ತಿರುಳನ್ನು ರೂಪಿಸಿತು. ಆದರೆ ಹಗುರ ಧಾತುಗಳು, ಅಲ್ಯೂಮಿನಿಯಮ್‌ ಸಿಲಿಕೇಟುಗಳು ಭೂಮಿಯ ಹೊರಚಿಪ್ಪಿನಲ್ಲಿ ಕೆನೆಗಟ್ಟಿದುವು. ಇವರೆಡರ ಮಧ್ಯದಲ್ಲಿ ಪ್ಲಾಸ್ಟಿಕ್‌ ಸದೃಶ ಅರೆಘನಸ್ಥಿತಿಯ ಶಿಲಾಪಾಕ (Magma) ನಿಂತಿತು. ಭೂಮಿ ಅಂತರಾಳದಲ್ಲಿ ಬೇರೆ ಬೇರೆ ಗೋಳಗಳಾಗಿ ಪ್ರತ್ಯೇಕಗೊಳ್ಳಲು ಸುದೀರ್ಘ ಕಾಲವನ್ನೇ ತೆಗೆದುಕೊಂಡಿದೆ. ಅಂದರೆ 370 ರಿಂದ 450 ಕೋಟಿ ವರ್ಷಗಳ ನಡುವೆ ಭೂಮಿ ವಿಕಾಸದ ಮೊದಲ ಅವಸ್ಥೆಯನ್ನು ಮುಗಿಸಿದೆ.

 

ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)

Share This Article
Leave a Comment

Leave a Reply

Your email address will not be published. Required fields are marked *