ಮಕ್ಕಳಲ್ಲಿ ದಂತ ಆರೋಗ್ಯದ ಕಾಳಜಿ ಹೇಗಿರಬೇಕು ?

5 Min Read

ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ
ಮೊ : 9342466936

ಸಾಮಾನ್ಯವಾಗಿ ಮಕ್ಕಳ ದಂತ ಆರೋಗ್ಯ ಕಾಳಜಿಯ ಬಗ್ಗೆ ಬಹಳಷ್ಟು ಪಾಲಕರಲ್ಲಿ ಅರಿವಿನ ಕೊರತೆ ಇರುತ್ತದೆ. ಆದರೆ ನಿಜವಾಗಿ ಮಕ್ಕಳಲ್ಲಿ ದಂತ ಆರೋಗ್ಯದ ರಕ್ಷಣೆಯು ಒಂದು ಪ್ರಮುಖವಾದ ವಿಚಾರವಾಗಿದ್ದು ಮಹತ್ವಪೂರ್ಣವಾಗಿರುತ್ತದೆ.

 

ಎಲ್ಲಾ ಅಂಗಾಂಗಗಳಂತೆ ಹಲ್ಲು ಕೂಡ ಒಂದು ಪ್ರಮುಖ ಅಂಗವಾಗಿದ್ದು ಅದರ ಬೆಳವಣಿಗೆ ಹಾಗೂ ಅದರ ಆರೋಗ್ಯ ರಕ್ಷಣೆ ಗಳಿಂದ ಮುಂದೆ ಬರುವ ಪ್ರೌಢ ಹಲ್ಲುಗಳಿಗೆ ಭದ್ರ ಬುನಾದಿ ಆಗಿರುತ್ತದೆ. ಹೇಗೆ ಒಂದು ಕಟ್ಟಡಕ್ಕೆ ಭದ್ರ ಅಡಿಪಾಯವು ಕಟ್ಟಡಕ್ಕೆ ಆಧಾರವಾಗಿ ನಿಲ್ಲಬಲ್ಲದೋ ಅದೇ ರೀತಿ ಪೂರ್ಣ ಆರೋಗ್ಯಕರ ಹಾಲು ಹಲ್ಲುಗಳು ಮುಂದೆ ಶಾಶ್ವತ ಹಲ್ಲುಗಳಿಗೆ ದಾರಿ ಮಾಡಿಕೊಡುತ್ತವೆ. ದೊಡ್ಡವರ ಕಾಯಂ ಹಲ್ಲುಗಳಿಗೆ ಕೊಡುವ ಗಮನ ಹಾಗೂ ಮಹತ್ವವನ್ನು ಮಕ್ಕಳ ಹಾಲು ಹಲ್ಲಿಗಳಿಗೂ ನೀಡಬೇಕು.
ಮಕ್ಕಳ ದಂತಾರೋಗ್ಯದ ರಕ್ಷಣೆಯನ್ನು ಹಲ್ಲು ಹುಟ್ಟುವ ಮೊದಲೇ ಪ್ರಾರಂಭಿಸಬೇಕು.
ಹೇಗಿದ್ದರೂ ಹಾಲು ಹಲ್ಲುಗಳು ಉದುರುವಂಥಹದ್ದು, ಅದಕ್ಕೆ ಏಕೆ ಅಷ್ಟೊಂದು ಆರೈಕೆ ಗಮನ ಎಂಬ ನಿರ್ಲಕ್ಷ್ಯ ಸಲ್ಲದು. ಮತ್ತೆ ಕೆಲವು ಹಾಲು ಹಲ್ಲುಗಳಿಗೆ ಅತ್ಯಂತ ತುತ್ತು ಚಿಕಿತ್ಸೆ ಅಗತ್ಯವಿದ್ದರೂ ಕೂಡ ನಿರ್ಲಕ್ಷ್ಯ ಮಾಡಿ ಮುಂದೆ ದೊಡ್ಡ ತೊಂದರೆಗಳಿಗೆ ಆಹ್ವಾನ ನೀಡುತ್ತಾರೆ. ಈ ರೀತಿ ನಿರ್ಲಕ್ಷತನದಿಂದ ಮುಂದೆ ಹುಟ್ಟುವ ಶಾಶ್ವತ ಹಲ್ಲುಗಳು ಅದರ ರಚನೆಯಲ್ಲಿ ಏರುಪೇರಾಗಬಹುದು ಅಥವಾ ಹುಳುಕು ಹಿಡಿದು ಅವಧಿಗೆ ಮುನ್ನವೇ ಶಾಶ್ವತ ಹಾನಿಗೆ ಈಡಾಗಬಹುದು. ವಕ್ರತನ ಬಂದು ವಕ್ರದಂತ ಹಾಗೂ ದೋಷ ಪೂರ್ಣ ಅನಾರೋಗ್ಯಕರ ಬೆಳವಣಿಗೆ ಆಗುವ ಹಲ್ಲಿನ ರಚನೆಗೆ ಕಾರಣವೂ ಆಗಬಹುದು.

*ಮಕ್ಕಳ ಹಾಲು ಹಲ್ಲುಗಳು ಕಾರಣವಾಗಲು ಕಾರಣವೇನು?
* ಖಾಯಂ ಹಲ್ಲುಗಳಷ್ಟು ಇವು ಹೆಚ್ಚು ಬಲಯುತ ಆಗಿರುವುದಿಲ್ಲ.ಹಾಗಾಗಿ ಹುಳುಕು ಹಿಡಿಯಲು, ಹಾಳಾಗಲು ಬೇಗ ಕಾರಣವಾಗುತ್ತದೆ.
* ದೊಡ್ಡವರಷ್ಟು ಮಕ್ಕಳು ತಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದಿಲ್ಲ.
* ಹಲ್ಲಿನ ಆರೋಗ್ಯದ ಮಹತ್ವ ಮಕ್ಕಳಲ್ಲಿ ಇರುವುದಿಲ್ಲ.
* ಪೋಷಕರ ಅಲಕ್ಷ್ಯತನ ಹಾಗೂ ಅನಾಧಾರ ಮನೋಭಾವ.
* ಮಕ್ಕಳಲ್ಲಿ ಸ್ವಚ್ಛತೆಯ ಹಾಗೂ ದಂತ ಆರೋಗ್ಯದ ಬಗ್ಗೆ ಮಾಹಿತಿ ಅರಿವಿನ ಕೊರತೆ.
* ಹಾಲು ಹಲ್ಲುಗಳ ಮಹತ್ವ ತಿಳಿದುಕೊಳ್ಳದೆ ಇರುವುದು.
* ಸಣ್ಣ ಸಮಸ್ಯೆ ಅದಾಗಲೇ ಅದರ ಬಗ್ಗೆ ಮಹತ್ವ ಕೊಡದೆ ದೊಡ್ಡದಾಗುವ ತನಕ ಕಾಯುವುದು.

*ಮಕ್ಕಳಲ್ಲಿ ಸಾಮಾನ್ಯವಾಗಿ ಬರುವ ದಂತ ಸಮಸ್ಯೆಗಳು.*
* ಹಲ್ಲು ಮೂಡುವ ಸಮಯದಲ್ಲಿ ಬರುವ ಟೀತಿಂಗ್ (teething )ಸಮಸ್ಯೆ( 6-8ನೇ ತಿಂಗಳ ಮಕ್ಕಳಲ್ಲಿ ಕಂಡು ಬರುವ ಭೇದಿ, ವಾಂತಿ,ಕಿರಿಕಿರಿ ಸತತ ಅಳು )
* ಹಲ್ಲು ಬರುವಾಗ ಆಗುವ ವಸಡಿನ ಊತ ದುರ್ವಾಸನೆ, ವಸಡಿನಲ್ಲಿ ರಕ್ತ ಬರುವುದು.
* ನಿಗದಿತ ಸಮಯಕ್ಕೆ ಹಲ್ಲು ಹುಟ್ಟದಿರುವುದು, ನಿಗದಿತ ಸಮಯಕ್ಕೆ ಹಲ್ಲು ಉದುರದೇ ಇರುವುದು.
* ವಕ್ರದಂತ ಸಮಸ್ಯೆ,ದವಡೆಗಳು ಮುಂದೆ ಚಾಚಿಕೊಂಡಿರುವುದು, ಬೆಳವಣಿಗೆ ಆಗದಿರುವುದು. ಸೀಳು ಅಂಗುಳ ಸಮಸ್ಯೆ
* ಇನ್ನಿತರ ದಂತ ಸಮಸ್ಯೆಗಳು.
* ಹಲ್ಲುಗಳಲ್ಲಿ ಪದೇಪದೇ ಆಹಾರ ಸಿಕ್ಕಿಕೊಳ್ಳುವುದು.
* ಪೌಷ್ಟಿಕ ಯುಕ್ತ ಆಹಾರ ಸೇವಿಸದೆ ಆರೋಗ್ಯಕರ ಹಲ್ಲುಗಳು ಮೂಡದಿರುವುದು.
* ಅತಿ ಫ್ಲೋರೈಡ್ ನೀರಿನ ಸೇವನೆಯಿಂದ ಫ್ಲೋರೋಸಿಸ್ ಸಮಸ್ಯೆ, ಹಳದಿ ಬಣ್ಣದ ಹಲ್ಲುಗಳು ಬರುವುದು.

ಹಲ್ಲು ಹುಟ್ಟುವ ಸಮಯ

*ಹಾಲು ಹಲ್ಲುಗಳು
ಸಾಮಾನ್ಯವಾಗಿ ಆರನೇ ತಿಂಗಳಿನಿಂದ ಹಿಡಿದು ಎರಡೂವರೆ -3 ವರ್ಷದ ತನಕ.
*6-7 ವರ್ಷದಲ್ಲಿ ಮೊದಲನೇ ಕಾಯಂ ದವಡೆ ಹಲ್ಲು ಮೂಡುತ್ತದೆ.
8-14 ವರ್ಷಗಳ ತನಕ ಖಾಯಂ ಹಲ್ಲುಗಳು ಮೂಡುತ್ತವೆ.
18-21 ಕನಕ ಮೂರನೇ ಹಲ್ಲು (ಬುದ್ಧಿ ಹಲ್ಲು) ಮೂಡುತ್ತದೆ.

ಪ್ರತಿ ಪಾಲಕರು ಎರಡನೇ ವಯಸ್ಸಿನಿಂದ ಹಿಡಿದು ಕನಿಷ್ಠ ನಾಲ್ಕನೇ ಐದನೇ ವಯಸ್ಸಿನ ತನಕ ಪ್ರತಿ ಮಕ್ಕಳಲ್ಲಿ ಹಾಲು ಹಲ್ಲಿನ ಮಹತ್ವವನ್ನು ತಿಳಿಸಿಕೊಟ್ಟು ದಂತ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು.

ಏನು ಮಾಡಬೇಕು ?
* ಪಾಲಕರು ತಮ್ಮ ಎಳೆ ಮಕ್ಕಳ ಹಾಲು ಹಲ್ಲಿನ ಆರೈಕೆಯನ್ನು ಎಂಟು ಹತ್ತನೇ ತಿಂಗಳಿನಿಂದಲೇ ಪ್ರಾರಂಭಿಸಬೇಕು.
* ಸ್ವಚ್ಛತೆಯ ಪಾಠವನ್ನು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಕೊಡಬೇಕು.
* ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು.
* ಎಳೆಯ ಮಕ್ಕಳ(1-2 ವರ್ಷ) ದವಡೆಯನ್ನು ಸ್ವಚ್ಛ ನೀರಿನಿಂದ ತೊಳೆಯಬೇಕು. ಊಟ ತಿಂಡಿ ಮಾಡಿಸಿದ ನಂತರ ಒದ್ದೆ ಬಟ್ಟೆಯಿಂದ, ಹತ್ತಿಯಿಂದ ವಸಡುಗಳನ್ನು ಒರೆಸಬೇಕು. ಹಾಲು ಕುಡಿದ ನಂತರ ಅಥವಾ ಏನನ್ನಾದರೂ ತಿಂದ ನಂತರ ಉಳಿಕೆ ಆಹಾರದ ಕಣಗಳನ್ನು ಇದರಿಂದ ಸ್ವಚ್ಛಗೊಳಿಸಿದಂತಾಗುತ್ತದೆ.
* ತಮ್ಮ ಬರವಣಿಗೆ ಶುರು ಮಾಡುವ ವಯಸ್ಸಿಗೆ( 3-4 ವರ್ಷ ) ಸ್ವತಃ ಬ್ರಷ್ ಮಾಡುವುದನ್ನು ಪಾಲಕರು ಹೇಳಿಕೊಡಬೇಕು ಇಲ್ಲವೇ ದಂತ ವೈದ್ಯರಿಂದ ತಿಳಿದುಕೊಂಡು ಅದರಂತೆ ಪಾಲಿಸಬೇಕು.
* ಮಗು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಬ್ರಷ್ ಬಳಕೆಯನ್ನು ಪ್ರಾರಂಭಿಸಬಹುದು. ಎಂದಿಗೂ ಗಡಸು ಬ್ರಷ್ ಬಳಕೆ ಬೇಡ. ಮೃದು ಬ್ರಿಸಲ್ ಇರುವ ಬ್ರಷ್ ಮಾತ್ರ ಬಳಸಬೇಕು.
* ಪ್ರತಿದಿನ ರಾತ್ರಿ ಬ್ರಷ್ ಮಾಡಿಸಿಯೇ ಮಲಗಿಸುವ ಅಭ್ಯಾಸ ಮಾಡಿಸಬೇಕು.
* ಸಿಹಿ,ಅಂಟು ಪದಾರ್ಥ, ಸಿಹಿ ಪಾನೀಯಗಳು, ಹಲ್ಲಿಗೆ ಅಂಟಿಕೊಳ್ಳುವ ಆಹಾರಗಳ ಬಳಕೆ ನಿಯಂತ್ರಿಸಬೇಕು. ಎರಡು ಊಟಗಳ ನಡುವೆ ಇದನ್ನು ಬಳಕೆ ಮಾಡಬಾರದು ಊಟದ ನಂತರ ಬೇಕಾದರೆ ಸೇವಿಸಬಹುದು.
* ದೋಷಪೂರಿತ ಹಲ್ಲುಗಳು ವಕ್ರ ಹಲ್ಲುಗಳು ವಕ್ರ ದವಡೆ ಬೆಳವಣಿಗೆಗಳನ್ನು ಪಾಲಕರು ಗಮನಿಸಬೇಕು. ಸಮಸ್ಯೆ ಕಂಡು ಬಂದರೆ ದಂತ ವೈದ್ಯರಿಂದ ಪರೀಕ್ಷೆ ಮಾಡಿಸಬೇಕು. ಇದನ್ನು ಏಳು ಅಥವಾ ಎಂಟನೇ ವಯಸ್ಸಿನಲ್ಲಿ ಪ್ರಾರಂಭಿಸಬಹುದು.
* ಅಂಗವಿಕಲ ಮಕ್ಕಳು ಹಾಗೂ ಮಾನಸಿಕವಾಗಿ ಬೆಳವಣಿಗೆ ಇಲ್ಲದ ಮಕ್ಕಳಲ್ಲಿ ಬ್ಯಾಟರಿ ಚಾಲಿತ ಬ್ರಷ್ ಬಳಸಬಹುದು.
* ಮೂಡುತ್ತಿರುವ ಹಲ್ಲುಗಳಲ್ಲಿ ವಕ್ರತೆ ಕಂಡು ಬಂದರೆ ದಂತ ವೈದ್ಯರನ್ನು ಶೀಘ್ರವಾಗಿ ಕಂಡು ಅವುಗಳ ಬೆಳವಣಿಗೆ ಬಗ್ಗೆ ಸಮಸ್ಯೆ, ರಚನೆಯಲ್ಲಿ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಅಗತ್ಯ ಬಿದ್ದರೆ ಅದರ ಚಿಕಿತ್ಸೆಗೆ ಮುಂದಾಗಬೇಕು.

ಏನು ಮಾಡಬಾರದು :
* ಮಕ್ಕಳಿಗೆ ದಂತ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಎಂದಿಗೂ ನಿರ್ಲಕ್ಷ್ಯತನ ಮಾಡಬಾರದು.
* ವಕ್ರ ಹಲ್ಲುಗಳು ಅದೃಷ್ಟದ ಸಂಕೇತ ಇದನ್ನು ಸರಿಪಡಿಸಿದರೆ ನಮ್ಮ ಅದೃಷ್ಟ ಹೋಗುತ್ತದೆ ಎಂಬ ತಪ್ಪು ಭಾವನೆಯಿಂದ ಹೊರ ಬರಬೇಕು. ಉಬ್ಬು ಹಲ್ಲು ದೇವರ ವರ ಎಂದು ಮೂಢನಂಬಿಕೆಗೆ ಒಳಗಾಗಿ ಮುಂದೆ ಸಮಸ್ಯೆ ತಂದುಕೊಳ್ಳಬಾರದು.
* ಮೂಢನಂಬಿಕೆಗಳಿಂದ ಆರೋಗ್ಯಕ್ಕೆ ತೊಂದರೆಗೆ ಈಡಾಗದೆ ವೈಜ್ಞಾನಿಕ ಆಲೋಚನೆ ಬೆಳೆಸಿಕೊಳ್ಳಬೇಕು.
* ಆಗತಾನೆ ಹುಟ್ಟಿದ ಮಕ್ಕಳಿನ ಬಾಯಲ್ಲಿ ಮೂಡಿ ಬರುವ ಹಲ್ಲು (ನೇಟಲ್ ಮತ್ತು ನಿಯೋ ನೇಟಲ್ ) ಹಲ್ಲುಗಳು ಅಶುಭ ಕುಟುಂಬದ ಸದಸ್ಯರಿಗೆ ಆಪತ್ತು ಎಂಬ ಮೂಢನಂಬಿಕೆಗೆ ಒಳಗಾಗದಿರಿ. ಅಸಹಜ ರೀತಿಯಲ್ಲಿ ಕೆಲವೊಮ್ಮೆ ಹಲ್ಲು ಹುಟ್ಟಿದರೂ ಯಾವುದೇ ತೊಂದರೆ ಇಲ್ಲ. ತಾಯಿಗೆ ಹಾಲುಣಿಸಲು ತೊಂದರೆ ಆದರೆ ಮಾತ್ರ ಇಂತಹ ಹಲ್ಲುಗಳನ್ನು ತೆಗೆಸಬೇಕು.
* ದೊಡ್ಡವರಿಗೆ ಮಾಡುವ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಮಕ್ಕಳಿಗೂ ಕೂಡ ಮಾಡಬಹುದಾಗಿದ್ದು ಅವಶ್ಯಕತೆಗೆ ಅನುಗುಣವಾಗಿ ಇದನ್ನು ವೈದ್ಯರು ನಿರ್ಧರಿಸುತ್ತಾರೆ.

ಹಾಲು ಹಲ್ಲುಗಳು ಕೂಡ ದೊಡ್ಡವರ ಕಾಯಂ ಹಲ್ಲುಗಳಷ್ಟೇ ಪ್ರಾಮುಖ್ಯತೆ ಪಡೆದಿದ್ದು ಅದರ ಆರೋಗ್ಯವನ್ನು ಎಂದಿಗೂ ಕಡೆಗಣಿಸಬಾರದು

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks