ಸಾಧಕರಿಗೆ ನಾವೆಷ್ಟು ಗೌರವ ಕೊಟ್ಟಿದ್ದೇವೆ ? ಒಂದು ಅವಲೋಕನ..!

1 Min Read

ಸುದ್ದಿಒನ್ ವಿಶೇಷ
ಲೇಖಕರು :
ರುದ್ರಮೂರ್ತಿ ಎಂ. ಜೆ
ಚಿತ್ರದುರ್ಗ
ಮೊ : 94486 64932

ಕಳೆದೆರಡು ವಾರಗಳ ಹಿಂದೆ ಸಾಲು ಮರದ ತಿಮ್ಮಕ್ಕ ಎಂದೇ ಖ್ಯಾತಿ ಹೊಂದಿದ್ದ ವೃಕ್ಷಪ್ರೇಮಿ ಮಹಾತಾಯಿ ನಿಧನ ಹೊಂದಿದರು. ನಾವು ಅವರನ್ನು ಹಾಡಿ ಹೊಗಳಿದೆವು. ಅವರು ಏನು ಸಾಧನೆ ಮಾಡಿದ್ದಕ್ಕೆ ಅರಿಗಷ್ಟು ಗೌರವ ಕೊಟ್ಟೆವೆಂಬುದನ್ನ ಅವಲೋಕಿಸಿದರೆ..! ಅನಕ್ಷರಸ್ಥರಾದರೂ ಅಕ್ಷರವಂತರನ್ನೂ ನಾಚಿಸುವಂತಿತ್ತು ಅವರ ಸಾಧನೆ. ಪರಿಸರದ ಬಗ್ಗೆ ಅವರು ಮಾಡಿದ ಕೆಲಸ ಅನುಪಮವಾದದ್ದು. ಮರಗಳೇ ತನ್ನ ಮಕ್ಕಳೆಂದು ತಿಳಿದು, ತಮ್ಮ ಭಾಗದಲ್ಲಿ ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ದೊಡ್ಡ ಮರಗಳಾಗುವ ತನಕ ಸಲಹಿದ ಕಾರಣ ಅವರು ಜನಮಾನಸದಲ್ಲಿ ಸ್ಥಾನ ಪಡೆದರು. ಅವರೇನು ಮಾಡಿದರು ? ಅವರನ್ನೇಕೆ ಕೊಂಡಾಡಿದವೆಂಬುದು ಅರಿವಾಗಿ ಅವರು ಮಾಡಿದ್ದರಲ್ಲಿ ಕಿಂಚಿತ್ತಾದರೂ ನಡೆದು ತೋರಿಸಿದರೆ ಸಾಕಲ್ಲವೇ…

 

ಹಾಗೆಯೇ ಮೊನ್ನೆ ದಿನ ತನ್ನ ಬಾಲ್ಯ ಜೀವನದಲ್ಲಿ ಕಡು ಬಡತನ ಅನುಭವಿಸಿ ಕಷ್ಟಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು, ಪರಿಶ್ರಮದಿಂದ ಓದಿ ಅದರಿಂದ ಉನ್ನತ ಹುದ್ದೆ ಅಲಂಕರಿಸಿ ಸಾಧ್ಯವಾದಷ್ಟು ಜನಪರ ಕೆಲಸ ಮಾಡಿ, ಇಂದಿನ ಯುವಜನತೆ ಹೇಗೆ ಅಭ್ಯಾಸ ಮಾಡಬೇಕು, ಸಮಾಜದಲ್ಲಿ ಹೇಗಿರಬೇಕೆಂಬ ಸಲಹೆಗಳನ್ನು ನೀಡುತ್ತಾ, ತಾನು ಕೆಲಸ ನಿರ್ವಹಿಸಿದ ಕಡೆಯಲೆಲ್ಲಾ ತಮ್ಮದೇ ಛಾಪನ್ನು ಉಳಿಸುವ ಕೆಲಸ ಮಾಡಿದ ಮಹಾಂತೇಶ್ ಬೀಳಗಿಯವರ ಆಕಸ್ಮಿಕ ನಿಧನವೂ ಸಹ ಜನರ ನೋವಿಗೆ ಕಾರಣವಾಗಿ ಕಂಬನಿ ಮಿಡಿಯುವಂತಾಯಿತು.

ಸಾಕಷ್ಟು ಅಧಿಕಾರಗಳಿದ್ದಾರೆ, ಅವರೆಲ್ಲರೂ ಬೀಳಗಿಯವರಂತೆ ಕರ್ತವ್ಯ ನಿರ್ವಹಿಸಿದರೆ ಊಹಿಸಲು ಸಾಧ್ಯವಿರದ ಅಭಿವೃದ್ಧಿ ಸಾಧ್ಯವಿದೆ. ಅಧಿಕಾರಿಯೊಬ್ಬರು ಮಾದರಿಯಾಗಿ ಕೆಲಸ ಮಾಡಿದ್ದರಿಂದ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಇವರ ವ್ಯಕ್ತಿತ್ವದ ಬಗ್ಗೆ ಗುಣಗಾನ ನಡೆದು, ಹೀಗಾಗಬಾರದಿತ್ತೆಂಬ ನೋವು ತುಂಬಿದ ಮಾತುಗಳು ಕೇಳಿ ಬಂದವು. ಸಾಧಕರನ್ನು ಒಂದು ದಿನ ಹಾಡಿ ಹೋಗಳಿ ಮರೆತು ಬಿಡುವುದಕ್ಕಿಂತ ಅವರನ್ನ ,ಅವರ ಕೆಲಸವನ್ನ ಅನುಸರಣೆ ಮಾಡಿ ಅನುಷ್ಠಾನಕ್ಕೆ ತಂದರೆ ಅದೇ ನಾವು ಅವರಿಗೆ ಕೊಡುವ ನಿಜ ಗೌರವ ಎಂದೆನಿಸುತ್ತದೆ.

ರುದ್ರಮೂರ್ತಿ ಎಂ. ಜೆ
ಚಿತ್ರದುರ್ಗ
ಮೊ : 94486 64932

Share This Article