ಟೈಟಾನಿಕ್‌ ಹಡಗು ಡಿಕ್ಕಿ ಹೊಡೆದ ಬರ್ಫಿನ ಗುಡ್ಡಗಳು ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಸಂಪೂರ್ಣ ಮಾಹಿತಿ…!

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821

ಸುದ್ದಿಒನ್ :

ಬರ್ಫಿನ ಗುಡ್ಡಗಳು ನೋಡಲು ಬಹಳ ಸುಂದರ. ವಾಸ್ತವದಲ್ಲಿ ಬರ್ಫಿನ ಗುಡ್ಡಗಳೆಂದರೆ ಏನು ? ಎಲ್ಲಿಂದ ಬರುತ್ತವೆ ? ಎನ್ನುವುದು ಕುತೂಹಲ ಹುಟ್ಟಿಸುವ ಪ್ರಶ್ನೆಗಳು. “ಟೈಟಾನಿಕ್‌” ಹಡಗಿನ ದುರಂತ ಕತೆಯನ್ನು ನೀವು ಕೇಳಿರಬಹುದು. 1912ರ ಏಪ್ರಿಲ್‌ 14 ರಂದು ಈ ಬೃಹತ್‌ ಹಡಗು ಬರ್ಫಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಮುಳುಗಿತು. ಸುಮಾರು 1513 ಮಂದಿ ಜಲಸಮಾಧಿಯಾದರು.

ಬರ್ಫಿನ ಗುಡ್ಡಗಳೆಂದರೆ ಸಮುದ್ರದ ಮೇಲೆ ತೇಲುವ ಬೃಹತ್‌ ಹಿಮಗಡ್ಡೆಗಳು. ಇದರ ಒಂಬತ್ತನೇ ಒಂದರಷ್ಟು ಭಾಗ ಮಾತ್ರ ನೀರಿನ ಮೇಲೆ ಕಾಣುತ್ತದೆ. ಉಳಿದ ಭಾಗಗಳೆಲ್ಲ ನೀರಿನೊಳಗೆ ಮುಳುಗಿರುತ್ತದೆ. ಹಡಗುಗಳ ಮಟ್ಟಿಗೆ ಇದು ಬಹಳ ಅಪಾಯಕಾರಿ. ಸದಾ ಜಿಗಿಗುಡುವ ಉತ್ತರ ಅಟ್ಲಾಂಟಿಕ್‌ ಹಡಗು ಮಾರ್ಗಗಳಲ್ಲಿ ಇಂಥ ಹಿಮಗುಡ್ಡಗಳಿಂದಾಗಿ ಅನೇಕ ಅಪಘಾತಗಳು ಸಂಭವಿಸಿದೆ.

ಬರ್ಫಿನ ಗುಡ್ಡವೆಂದರೆ, ಹಿಮಪ್ರವಾಹದಿಂದ ಬೇರ್ಪಟ್ಟ ಘನೀಕೃತಗೊಂಡ ಬಂಡೆ. ಹಿಮಪ್ರವಾಹ ಅಥವಾ ಗ್ಲೇಸಿಯರ್‌ ಎಂದರೆ ಹಿಮನದಿಯ ಪರ್ವತಗಳ ತುದಿಯ ತಗ್ಗು ಪ್ರದೇಶಗಳಲ್ಲಿ ಮಂಜು ಶೇಖರಣೆಗೊಂಡು ರೂಪುಗೊಂಡ ಹಿಮಪ್ರವಾಹಗಳು. ಒಂದು ಹಂತದಲ್ಲಿ ಇವು ಗಟ್ಟಿಯಾಗಿ, ನದಿಗಳಂತೆ ಉರುಳುತ್ತದೆ. ಇದರ ಸೆಳೆತದ ವೇಗ ದಿನಕ್ಕೆ ಒಂದು ಸೆಂಟಿಮೀಟರ್‌ನಿಂದ ಒಂದು ಮೀಟರ್‌ವರೆಗೆ ಇರಬಹುದು ಅಷ್ಟೇ. ಪರ್ವತಗಳ ಕಣಿವೆಯಿಂದ ಹಾಯ್ದು ಬರುವಾಗ, ತನ್ನ ಪಕ್ಕದಲ್ಲಿರುವ ದೊಡ್ಡ ದೊಡ್ಡ ಬಂಡೆಗಳನ್ನೂ ಅವು ಕೊಂಡೊಯ್ಯುತ್ತವೆ. ಹಿಮಪ್ರವಾಹ ಸಮುದ್ರ ಸೇರುವಾಗ ಹಿಮವನ್ನು ಅವುಚಿಕೊಂಡ ಇಂಥ ಬಂಡೆಗಳು ಬೇರ್ಪಟ್ಟು ಸ್ವತಂತ್ರವಾಗಿ ತೇಲುತ್ತವೆ. ಇವೇ ಬರ್ಫಿನ ಗುಡ್ಡೆಗಳು.

ಹಿಮಪ್ರವಾಹದ ಅವಶೇಷಗಳನ್ನು ನಾವು ಹಲವು ಕಡೆ ನೋಡಬಹುದು. ಹಿಮಯುಗದಲ್ಲಿ ಉತ್ತರ ಅಮೇರಿಕ ಹಾಗೂ ಯುರೋಪಿನ ಉತ್ತರದ ಭೂಭಾಗಗಳು ಹಿಮಾವೃತವಾಗಿದ್ದವು. ಕೆಲವು ದಶಲಕ್ಷ ವರ್ಷಗಳಿಗೊಮ್ಮೆ ಈ ಹಿಮಯುಗ ಮರುಕಳಿಸುತ್ತದೆ. ಕೊನೆಯ ಹಿಮಯುಗ 10 ಸಾವಿರ ವರ್ಷಗಳ ಹಿಂದೆ ಇದ್ದಿರಬೇಕು ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಭೂಮಿಯ ಉಷ್ಣತೆ ತೀರಾ ಕೆಳಮಟ್ಟದಲ್ಲಿದ್ದು, ಹೆಚ್ಚಿನ ಭೂಭಾಗಗಳನ್ನು ಹಿಮದ ಫಲಕಗಳು ಆವರಿಸಿರುತ್ತವೆ. ಈಗಲೂ ಭೂಮಿಯ ಶೇಕಡ 10ರಷ್ಟು ಭಾಗ ಹಿಮಾವೃತವಾಗಿವೆ. ಗ್ರೀನ್‌ಲ್ಯಾಂಡ್‌ನ ಅನೇಕ ದ್ವೀಪಗಳಲ್ಲಿ ಇಂದಿಗೂ ಹಿಮದ ಫಲಕಗಳಿವೆ. ಹಿಮಪ್ರವಾಹವನ್ನು ಆಲ್ಫ್ಸ್‌, ಹಿಮಾಲಯ ಮತ್ತು ಅಲಸ್ಕಾ, ಕೆನಡಾ, ಗ್ರೀನ್‌ಲ್ಯಾಂಡ್‌, ನ್ಯೂಜಿಲೆಂಡ್‌ ಮತ್ತು ಅಂಟಾರ್ಟಿಕದ ಪರ್ವತ ಶ್ರೇಣಿಗಳಲ್ಲೂ ನೋಡಬಹುದು.

ಅಂಟಾರ್ಟಿಕಾ ತುದಿಯಿಂದ ಅನೇಕ ಬರ್ಫಿನ ಗುಡ್ಡೆಗಳು ಬೇರ್ಪಡುತ್ತವೆ. ಇವುಗಳ ಮೇಲ್ಭಾಗ, ಆರ್ಕ್‌ಟಿಕ್‌ಗಿಂತಲೂ ಹೆಚ್ಚು ಸಮತಟ್ಟಾಗಿದೆ. ಆರ್ಕ್‌ಟಿಕ್‌ನಲ್ಲಿ ಬರ್ಫಿನ ಗುಡ್ಡೆಗಳು ಗ್ರೀನ್‌ಲ್ಯಾಂಡ್‌ ಹಿಮದ ಫಲಕಗಳಿಂದ ಬೇರ್ಪಡುತ್ತವೆ. ಇವು ಅಂಟಾರ್ಟಿಕಾಗಳಷ್ಟು ವಿಸ್ತಾರವಾಗಿಲ್ಲದಿದ್ದರೂ, ಎತ್ತರವಾಗಿರುತ್ತದೆ. ಬರ್ಫಿನ ಗುಡ್ಡೆಗಳು, ಧ್ರುವ ಪ್ರದೇಶದ ಬಳಿ ಬರಲಾರಂಭಿಸುತ್ತಿದ್ದಂತೆ ಕರಗಲಾರಂಭಿಸುತ್ತದೆ. ಗಾತ್ರವೂ ಕಡಿಮೆಯಾಗುತ್ತದೆ. ಗ್ರೀನ್‌ಲ್ಯಾಂಡ್‌ನ ಬರ್ಫಿನ ಗುಡ್ಡೆಗಳು ಎರಡು ವರ್ಷ ಕಾಲ ಬಾಳಿದರೆ, ಆರ್ಕ್‌ಟಿಕ್‌ ಮತ್ತು ಅಂಟಾರ್ಟಿಕದ ಬರ್ಫಿನ ಗುಡ್ಡೆಗಳ ಆಯುಷ್ಯ ಸುಮಾರು 10 ವರ್ಷಗಳು.

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks