ಇಂದು ಸಿಎಂ ಆಗಿ ಸಿದ್ದರಾಮಯ್ಯ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರ ಜೊತೆಗೆ ಸಚಿವರಾಗಿಯೂ ಎಂಟು ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಜ್ಜಯ್ಯನ ಹಿನ್ನೆಲೆ ಇಲ್ಲಿದೆ.
ಡಿಕೆ ಶಿವಕುಮಾರ್ ಅವರಿಗೆ ಗಂಗಾಧರ ಅಜ್ಜಯ್ಯ ಎಂದರೆ ಗೌರವ, ಭಕ್ತಿ ಜಾಸ್ತಿ. ಕಷ್ಟವಾದರೂ, ಖುಷಿಯಾದರೂ ಅಜ್ಜಯ್ಯನ ಸನ್ನಿಧಾನಕ್ಕೆ ಭೇಟಿ ನೀಡುತ್ತಾ ಇರುತ್ತಾರೆ. ಈ ಸಲ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲೂ ಅಜ್ಜಯ್ಯನ ಮಠದಿಂದ ಮಾರ್ಗದರ್ಶನ ಪಡೆದಿದ್ದರ ಬಗ್ಗೆ ಇತ್ತಿಚೆಗೆ ಹಂಚಿಕೊಂಡಿದ್ದರು.
ಇನ್ನು ಸರ್ಕಾರ ಬಹುಮತದೊಂದಿಗೆ ರಚನೆಯಾಗಿದ್ದು, ಪ್ರಮಾಣವನ್ನು ಅಜ್ಜಯ್ಯನ ಹೆಸರಿನಲ್ಲಿಯೇ ಸ್ವೀಕಾರ ಮಾಡಿದ್ದಾರೆ. ಅಜ್ಜಯ್ಯನ ಮಠ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕರೆಯಲ್ಲಿ ಇದೆ. ಸುಮಾರು 800 ವರ್ಷಗಳ ಇತಿಹಾಸವಿದೆಯಂತೆ. ಹಿಂದೆ ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರಗೈಯುತ್ತಾ ಬಂದು, ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದರಂತೆ.
ಒಮ್ಮೆ ಕಾಡಸಿದ್ದೇಶ್ವರರು ತಪ್ಪಿಸ್ಸಿಗೆ ಕುಳಿತಿದ್ದಾಗ ಮುದಿಯಪ್ಪ ನಾಯಕ ಎಂಬ ಅರಸ ಬೇಟೆಯಾಡಲು ಬಂದು, ಇವರನ್ನು ಪ್ರಾಣಿ ಎಂದು ಭಾವಿಸಿ ಬಾಣ ಬಿಟ್ಟರಂತೆ. ಆದರೆ ಅವರಿಗೆ ಬಾಣತಾಗಿದರೂ ಏನೂ ಆಗಲಿಲ್ಲವಂತೆ. ಬಳಿಕ ಕಾಡಸಿದ್ದೇಶ್ವರರನ್ನು ನೋಡಿ ತಪ್ಪಿನ ಅರಿವಾಗಿ, ಮುದಿಯಪ್ಪ ನಾಯಕ ಕಣ್ಣೀರಿಟ್ಟನಂತೆ. ಕೊನೆಗೆ ಆತನನ್ನು ಕ್ಷಮಿಸಿದ ಕಾಡಸಿದ್ದೇಶ್ವರರು, ಅನುಗ್ರಹಿಸಿದರಂತೆ. ಹೀಗೆ ಹಿನ್ನೆಲೆ ಇರುವ ಈ ಮಠಕ್ಕೆ ಡಿಕೆ ಶಿವಕುಮಾರ್ ಅವರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ.