ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಬಿಡುವುದನ್ನು ವಿರೋಧಿಸಿ ಈಗಾಗಲೇ ಬೆಂಗಳೂರು ಬಂದ್ ಅನ್ನು ಯಶಸ್ವಿಯಾಗಿ ಮಾಡಲಾಗಿದೆ. ಇದೀಗ ನಾಳೆ ಕರ್ನಾಟಕ ಬಂದ್ ಮಾಡುವುದಕ್ಕೆ ಎಲ್ಲಾ ತಯಾರಿ ನಡೆದಿದೆ. ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿವೆ.
ನಾಳಿನ ಕರ್ನಾಟಕ ಬಂದ್ ನಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಇನ್ನುಳಿದ ಸೇವೆಗಳು ಸಿಗುವುದಿ ಅಮಾನವಾಗಿದೆ. ಕರ್ನಾಟಕ ಬಂದ್ ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಓಲಾ-ಉಬರ್ ಕೂಡ ಬೆಂಬಲ ಸೂಚಿಸಿದ್ದು, ವಾಹನಗಳ ಸಂಚಾರವೂ ಇರುವುದಿಲ್ಲ.
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ಇರಲಿದೆ. ಕನ್ನಡಪರ ಸಂಘಟನೆಗಳಿಂದ ಟೌನ್ ಹಾಲ್ ನಿಂದ ಹಿಡಿದು ಫ್ರೀಡಂ ಪಾರ್ಕ್ ತನಕ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಾರಾಯಣಗೌಡ ನೇತೃತ್ವ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದಿಂದ ಬೃಹತ್ ಮೆರವಣಿಗೆ ನಡೆಯಲಿದೆ.
ಇನ್ನು ಕನ್ನಡ ಪರ ಹೋರಾಟಗಾರರು ಹೆದ್ದಾರಿಗಳನ್ನು ತಡೆದು, ಟೋಲ್ ಗಳಿಗೆ, ರೈಲು ನಿಲ್ದಾಣಗಳಿಗೆ, ವಿಮಾನ ನಿಲ್ದಾಣಗಳಿಗೆ ಮುತ್ತಿಗೆ ಹಾಕಲಿದ್ದಾರೆ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಮಂಗಳೂರಿನವರೆಗೂ ಬಂದ್ ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಚಿತ್ರಮಂದಿರಗಳು, ಓಲಾ-ಉಬರ್, ಆಟೋ, ಖಾಸಗಿ ಬಸ್ ಗಳು, ಮಾಲ್ ಗಳು ಇರುವುದಿಲ್ಲ. ಕೆಎಸ್ಆರ್ಟಿಸಿ ಬಸ್, ಬಿಎಂಟಿಸಿ ಬಸ್ ಸೇರಿದಂತೆ ನಾಲ್ಕು ನಿಗಮಗಳಿಂದ ಬಂದ್ ಬೆಂಬಲ ನೀಡುವ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಹೀಗಾಗಿ ನಾಳಿನ ಕರ್ನಾಟಕ ಬಂದ್ ನಲ್ಲಿ ಸರ್ಕಾರಿ ಬಸ್ ಗಳ ಸಂಚಾರ ಇರಬಹುದು.