ತುಮಕೂರು; ಭದ್ರಾ ಮೇಲ್ದಂಡೆ ಯೋಜನೆ ಐದು ದಶಕಗಳ ಕನಸು. ಅದಕ್ಕಾಗಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಜನ ಕಾಯ್ತಾ ಇದಾರೆ. ಆದರೆ ಅದ್ಯಾಕೋ ಏನೋ ಆ ಕನಸು ಈಡೇರುವುದು ಅಸಾಧ್ಯ ಎನಿಸುತ್ತಿದೆ. ಯಾಕಂದ್ರೆ ಯೋಜನೆಯ ಕಾಮಗಾರಿ ತುಂಬಾ ನಿಧಾನಗತಿಯಲ್ಲಿ ಸಾಗುತ್ತಾ ಇದೆ. ಅಷ್ಟೇ ಅಲ್ಲ ಈ ಯೋಜನೆಗಾಗಿ ಕೇಂದ್ರದಿಂದ ಅನೌನ್ಸ್ ಆಗಿದ್ದ 5,300 ಕೋಟಿ ಹಣ ಕೂಡ ಬಿಡುಗಡೆಯಾಗಿಲ್ಲ. 2028ರ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದರು. ಇದೀಗ ಕಾಮಗಾರಿ ಪಡೆಯುತ್ತಿರುವ ವೇಗ ನೋಡಿದ್ರೆ ಸ್ಲೋ ಇದೆ.
16,125.48 ಕೋಟಿ ರೂ. ಯೋಜನಾ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ 10,121.75 ಕೋಟಿ ರೂ. ಬಳಕೆಯಾಗಿದೆ. ಯೋಜನೆ ವಿಳಂಬವಾದಷ್ಟೂ ವೆಚ್ಚ ಕೂಡ ಹೆಚ್ಚಾಗುತ್ತದೆ. ಹೆಚ್ಚುವರಿ ಅನುದಾನದ ಅವಶ್ಯಕತೆಯೂ ತಲೆದೋರುತ್ತದೆ. ಇದೇ ಆಮೆಗತಿ ನಡೆ ಹಾಗೂ ಅನುದಾನ ನೀಡಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೀನಮೇಷ ಮುಂದುವರಿದರೆ ಇನ್ನೂ ಮೂರು ವರ್ಷವಲ್ಲ 10 ವರ್ಷವಾದರೂ ಯೋಜನೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ತುಮಕೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ತಾಲೂಕುಗಳಿಗೆ ನೀರು ಹರಿಸುವ ಯೋಜನೆ ಇದಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಅಲ್ಲದೆ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರಿಗೆ ನೀರು ಹರಿಸುವ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯಾಗಿದೆ. ಚಿತ್ರದುರ್ಗ ಶಾಖಾ ನಾಲೆ ಹಾಗೂ ತುಮಕೂರು ಶಾಖಾ ನಾಲೆ ಸೇರಿದಂತೆ ಎರಡೂ ನಾಲೆಗಳ ಮೂಲಕ ಯೋಜನೆ ನೀರು ವ್ಯಾಪ್ತಿಯ ಜಿಲ್ಲೆಗಳಿಗೆ ಹರಿಯುತ್ತದೆ.






