ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಕಲಾಪದಲ್ಲಿ ಹಲವು ಸಮಸ್ಯೆಗಳು ಚರ್ಚೆಗೆ ಬಂದಿದೆ. ಇಂದು ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಆಲಿಸಬೇಕೆಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ ಸದನದಲ್ಲಿ ಗರಂ ಆಗಿದ್ದಾರೆ. ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡುತ್ತಿರುವುದು, ಈ ಭಾಗದ ಜನರ ಸಮಸ್ಯೆಯನ್ನು ಕೇಳುವುದಕ್ಕೆ. ಇಲ್ಲಿ ಕಲಾಪ ನಡೆಸಿ, ಬೆಂಗಳೂರಿನ ಸಮಸ್ಯೆ ಬಗ್ಗೆ ಮಾತನಾಡಿದರೆ ಹೇಗೆ..? ಎಂದು ಪ್ರಶ್ನೆ ಕೇಳಿದ್ದಾರೆ. ಇಲ್ಲಿ ಅಧಿವೇಶನ ಕರೆದಿರುವುದು ಈ ಭಾಗದ ಜನರ ಸಮಸ್ಯೆ ಬಗ್ಗೆ ಕೇಳುವುದಕ್ಕೆ ತಾನೇ..? ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತರಿಗೆ ಅನ್ಯಾಯವಾಗುತ್ತಿದೆ. ಕಬ್ಬು ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಬಿಟ್ಟು ಕಬ್ಬು ಬೆಳೆಯ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ ಎಂದು ಗರಂ ಆಗಿದ್ದಾರೆ.
ಲಕ್ಷ್ಮಣ್ ಸವದಿ ಪ್ರಶ್ನೆಗೆ ಸ್ಪೀಕರ್ ಯುಟಿ ಖಾದರ್ ಉತ್ತರ ನೀಡಿದ್ದಾರೆ. ಇಲ್ಲಿ ಅಧಿವೇಶನ ಕರೆದಿದ್ದು, ರಾಜ್ಯದ ಎಲ್ಲಾ ಸಮಸ್ಯೆಗಳನ್ನು ಕೇಳುವುದಕ್ಕೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಲಾಗುತ್ತದೆ. ಎಲ್ಲರ ಸಹಕಾರ ಇದ್ದರೆ ಬೇಗೆ ಬೇಗ ಚರ್ಚೆಗೆ ಅವಕಾಶ ನೀಡಬಹುದು. ಈಗಾಗಲೇ ಬರಗಾಲದ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಚರ್ಚೆ ಮುಗಿದ ಮೇಲೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಲು ಕಾಲಾವಕಾಶ ನೀಡಲಾಗುವುದು ಎಂದು ಲಕ್ಷ್ಮಣ್ ಸವದಿ ಪ್ರಶ್ನೆಗೆ ಸ್ಪೀಕರ್ ಯುಟಿ ಖಾದರ್ ಉತ್ತರ ನೀಡಿದ್ದಾರೆ.