ಹೊಸದುರ್ಗ ಪಟ್ಟಣದ ಹುಳಿಯಾರು ವೃತ್ತದ ಮುಖ್ಯರಸ್ತೆಯಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ.
ಪ್ರತಿ ಗುರುವಾರ ಹಾಗೂ ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಈ ಮಠವು ತನ್ನದೇ ಆದ ವೈಶಿಷ್ಟವನ್ನು ಹಾಗೂ ಭಕ್ತರನ್ನು ಹೊಂದಿದೆ. ಮಂತ್ರಾಲಯದ ಮುಖ್ಯ ಮಠಕ್ಕೆ ಇದು ಸೇರಿರುವುದಿಲ್ಲ. ಹಲವು ಜಾತಿ ಜನಾಂಗದ ಜನರು ಮಠದ ಅಭಿವೃದ್ಧಿ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
9 ಜನರ ಟ್ರಸ್ಟ್ ಇದ್ದು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಮುಖ್ಯರಸ್ತೆಯಲ್ಲಿ ವಾಹನಗಳ ಭರಾಟೆ, ಜನರ ಗೌಜುಗದ್ದಲವಿದ್ದರೂ ಮಠದ ಆವರಣದ ಒಳಗೆ ಕಾಲಿಡುತ್ತಿದ್ದಂತೆ ಅತ್ಯಂತ ನಿಶ್ಯಬ್ದ ಹಾಗೂ ಪ್ರಶಾಂತ ವಾತಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ.
ಪುರಾತನ ಕಾಲದಿಂದಲೂ ಇಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯ ಇದ್ದಿತು.
ಇಲ್ಲಿನ ಭಕ್ತರ ಅಪೇಕ್ಷೆಯ ಮೇರೆಗೆ 2004 ರಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿದ್ದ ಸುಶಮೀಂದ್ರ ತೀರ್ಥರು ಆಗಮಿಸಿ, ಮಂತ್ರಾಲಯದಲ್ಲಿ 48 ದಿನಗಳನ್ನು ಪೂಜಿಸಿದ ಮೃತ್ತಿಕೆಯನು ತಂದು ಬೃಂದಾವನ ಪ್ರತಿಷ್ಠಾಪಿಸಿ ಪೂಜೆಗೆ ಅನುವು ಮಾಡಿಕೊಟ್ಟರು. ಮಂತ್ರಾಲಯದ ಪೂಜಾ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರತಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಹೊಸದುರ್ಗ ಹಾಗೂ ಸುತ್ತಮುತ್ತಲ ಗ್ರಾಮದ ರಾಯರ ಭಕ್ತರು ಆಗಮಿಸಿ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡುತ್ತಾರೆ. ಪ್ರತಿ ಗುರುವಾರದ ದಿನ ಸಂಜೆ 7.30pm-8.30pm ವರೆಗೆ ರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಉತ್ಸವ, ಬೃಂದಾವನ ಪೂಜೆ ಹಾಗೂ ಶನಿವಾರದ ದಿನ ಆಂಜನೇಯ ಸ್ವಾಮಿಗಳ ಪ್ರಾಕಾರೋತ್ಸವ ನೆರವೇರುತ್ತದೆ. ಶ್ರಾವಣ ಮಾಸದಲ್ಲಿ ಮೂರುದಿನಗಳ ಕಾಲ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದ ನೆನಪಿಗೆ ಆರಾಧನಾ ಮಹೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತದೆ.
ಮಾಹಿತಿ : ಡಾ.ಸಂತೋಷ್ ಹೊಳಲ್ಕೆರೆ
ದಂತ ವೈದ್ಯರು, ಲೇಖಕರು
ಚಿತ್ರದುರ್ಗ-577501
ಮೊ.ನಂ: 9342466936