ಇತ್ತೀಚೆಗಷ್ಟೇ ಸದನದಲ್ಲಿ ಆದ ಬೆಳವಣಿಗೆಯಿಂದ ಬೇಸತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಅವರು ಘೋಷಣೆ ಮಾಡಿದ್ದರು. ಬಳಿಕ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಹಿಂದೆ ಸರಿದಿದ್ದರು. ಇದೀಗ ಮತ್ತೆ ರಾಜೀನಾಮೆ ನೀಡುವ ಬಗ್ಗೆ ಮಾತಾಡಿದ್ದಾರೆ.

ಮತ್ತೆ ರಾಜೀನಾಮೆ ಕೊಡುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ಸದನಕ್ಕೆ ಕಾಲಿಟ್ಟ ಮೇಲೆ ಅಲ್ಲಿ ಎಲ್ಲರು ಶಾಸಕರೆ. ಹಾಗಾಗಿ ಅಲ್ಲಿ ಯಾವುದೇ ವಯಸ್ಸಿನ ಪ್ರಶ್ನೆ ಎದುರಾಗುವುದಿಲ್ಲ. ಸದನದಲ್ಲಿ ಅನುಭವಿಗಳು ಹೇಳುವ ಪಾಠವನ್ನು ಕೇಳುವ ಪರಿಪಾಠವೂ ಇಲ್ಲ. ಇಲ್ಲಿ ಯಾರಿಗೂ ಯಾರ ಹೆದರಿಕೆಯೂ ಇಲ್ಲ. ಎಲ್ಲರಿಗೂ ಹಣ ಕೊಟ್ಟು ಆಯ್ಕೆಯಾಗಿ ಬರುತ್ತೇವೆ ಎಂಬ ಭಾವನೆ ಒಂದೆಡೆಯಾದರೆ, ಮತ್ತೊಂದೆಡೆ ಜಾತಿ ವ್ಯವಸ್ಥೆಯೂ ದೊಡ್ಡದಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಲ್ಲರು ತಿಳಿದುಕೊಳ್ಳಬೇಕು. ಈ ಹಿಂದೆ ರಾಜಕಾರಣಕ್ಕೂ, ಈಗ ಇರುವ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಇಲ್ಲಿ ಏನಿದ್ರು ಹಣ ಕೊಟ್ಟು ಗೆದ್ದು ಬರುವುದು. ಬೆಂಗಳೂರಿನಲ್ಲಿ ಕೂತು ಹಣ ಮಾಡಿ, ಇಲ್ಲಿ ಬಂದು ವಿಧಾನಪರಿಷತ್ ನಲ್ಲಿ ಗೆಲ್ಲುವ ಕೆಲಸವಾಗಿ ಬಿಟ್ಟಿದೆ.

ಎಲ್ಲಿಯವರೆಗೂ ಹಣ ಕೊಟ್ಟು ಮತ ಪಡೆಯುತ್ತಾರೋ, ಅಲ್ಲಿಯವರೆಗೂ ಪ್ರಜಾಪ್ರಭುತ್ವವನ್ನು ಕೇಳುವವರು ಯಾರೂ ಇರುವುದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ನಾನು ರಾಜೀನಾಮೆ ಕೊಡಬೇಕೆಂದು ತೀರ್ಮಾನ ಮಾಡಿದ್ದೇನೆ. ಸದನ ಎನ್ನುವುದು ಒಂದು ದೇವಸ್ಥಾನ. ಅಲ್ಲಿ ಹನಿಟ್ರ್ಯಾಪ್ ನಂತಹ ವಿಚಾರಗಳ ಚರ್ಚೆ ನಡೆಯುವುದೇ ತಲೆತಗ್ಗಿಸುವಂತಹ ವಿಚಾರ. ಇದರಿಂದ ಯಾರಿಗೆಒಳ್ಳೆಯದಾಗುತ್ತೆ..? ಹನಿಟ್ರ್ಯಾಪ್ ಬಲೆ ಬೀಸಿದವನು ಒಳ್ಳೆಯವನಲ್ಲ, ಅದರಲ್ಲಿ ಸಿಲುಕಿಕೊಂಡವನು ಒಳ್ಳೆಯವನಲ್ಲ ಎಂದು ಬಸವರಾಜ್ ಹೊರಟ್ಟಿ ಬೇಸರ ಹೊರ ಹಾಕಿದ್ದಾರೆ.

