ಬೆಳಗಾವಿ: ಬಸವರಾಜ್ ಹೊರಟ್ಟಿ ಸರ್ವಾನುಮತದಿಂದ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಅಧಿಕೃತವಾಗಿ ಘೋಷಣೆಯಾಗಬೇಕಿರುವುದೊಂದೆ ಬಾಕಿಯಿದೆ. ಹೊರಟ್ಟಿ ಅವರ ಎದುರಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡ ಅಭ್ಯರ್ಥಿಯನ್ನು ಹಾಕದೆಯೆ ಹೊರಟ್ಟಿ ಅವರನ್ನು ಅವಿರೋಧ ಆಯ್ಕೆ ಮಾಡಿದ್ದಾರೆ.
ಜೆಡಿಎಸ್ ನಲ್ಲಿದ್ದ ಬಸವರಾಜ್ ಹೊರಟ್ಟಿ ಅವರು ಬಿಜೆಪಿಗೆ ಬಂದ ಮೇಲೆ ಏಳು ಬಾರಿ ಎಂಎಲ್ಸಿಯಾಗಿ ಗೆದ್ದಿದ್ದಾರೆ. 76 ವರ್ಷ ವಯಸ್ಸಿನ ಹೊರಟ್ಟಿ ಅವರು ಜೂನ್ 22, 2018 ರಿಂದ ಡಿಸೆಂಬರ್ 12, 2018 ಮತ್ತು ಫೆಬ್ರವರಿ 16, 2021 ರಿಂದ ಮೇ 16, 2022 ರವರೆಗೆ ಎರಡು ಸಂದರ್ಭಗಳಲ್ಲಿ ಪರಿಷತ್ತಿನ ಹಂಗಾಮಿ ಅಧ್ಯಕ್ಷರಾಗಿದ್ದರು. ಹೊರಟ್ಟಿ ಮೊದಲ ಬಾರಿಗೆ 1980 ರಲ್ಲಿ MLC ಯಾಗಿ ಆಯ್ಕೆಯಾದವರು ದಾಖಲೆಯ 8ನೇ ಬಾರಿಗೆ ಗೆಲುವಿನ ಸರಣಿ ಮುಂದುವರಿಸಿದರು.
ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ನೀರಾವರಿ ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಸದಸ್ಯ ಎಸ್.ವಿ. ಸಂಕನೂರು ಉಪಸ್ಥಿತರಿದ್ದರು.