ಶಿವಮೊಗ್ಗ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಬಿವೈ ವಿಜಯೇಂದ್ರ ಅವರನ್ನು ದ್ವೇಷಿಸುವ, ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿರುವ ಬೆನ್ನಲ್ಲೇ ಈ ಸಲ ಕೂಡ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆಂದು ವಿಜಯೇಂದ್ರ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ವ್ಯವಸ್ಥಿತವಾಗಿ ಸಂಘಟನೆ, ಚುನಾವಣೆ ನಡೆಯುವುದು ಬಿಜೆಪಿಯಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ರಾಜ್ಯ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ.ಬನಾನು ಅಧ್ಯಕ್ಷನಾಗಿ ಕೆಲಸ ಮಾಡಿದ ರೀತಿ ಕಾರ್ಯಕರ್ತರಿಗೆ ಗೊತ್ತಿದೆ.
ನಾನು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂಬ ಪೂರ್ಣ ವಿಶ್ವಾಸವಿದೆ. ಜಿಲ್ಲಾಧ್ಯಕ್ಷರ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಅದೇ ರೀತಿ ಪೈಪೋಟಿ ಇದೆ. ಎಲ್ಲವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಇದೆ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿ, ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕು ಎಲ್ಲವೂ ಆಗಿದೆ. ಒಂದು ವಾರದಲ್ಲಿ ಯಾರೂ ಅಧ್ಯಕ್ಷರಾಗುತ್ತಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಅದಾದ ಬಳಿಕ ಎಲ್ಲವೂ ಸರಿಯಾಗಲಿದೆ. ಕಳೆದ ವರ್ಷದಿಂದ ನಾನು ಯಾರೂ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ ಎಂದಿದ್ದಾರೆ.