ರಾಜ್ಯದಲ್ಲಿ ಹನಿಟ್ರ್ಯಾಪ್ ಬಗ್ಗೆ ಗುಸುಗುಸು ಸುದ್ದಿ ಕೇಳಿ ಬರುತ್ತಿದೆ. ಆ ವಿಚಾರ ಕೂಡ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿದರು. ಇದೇ ವೇಳೆ ನೇರವಾಗಿ ಸಹಕಾರ ಸಚಿವ ರಾಜಣ್ಣರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದೇ ಸದನದಲ್ಲಿ ಹೇಳಿದರು. ಇದು ವಿಧಾನಸಭೆಯಲ್ಲಿ ಚರ್ಚೆಯನ್ನ ಹುಟ್ಟು ಹಾಕಿತ್ತು. ಯತ್ನಾಳ್ ಅವರ ಮಾತಿಗೆ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಯತ್ನಾಳ್ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು. ಕರ್ನಾಟಕ ರಾಜ್ಯ, ಸಿಡಿಗೆ ಕಾರ್ಖಾನೆ ಅಂತ ಬಹಳಷ್ಟು ಜನ ಹೇಳುತ್ತಾರೆ. ತುಮಕೂರಿನ ಇಬ್ಬರು ಪ್ರಭಾವಿ ಸಚಿವರಿಗೆ ಹನಿಟ್ರ್ಯಾಪ್ ಆಗಿದೆ ಎಂಬ ಸುದ್ದಿ ಬರುತ್ತಿದೆ. ಇದು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಲ್ಲಿ ನಾಯಕರ ಹನಿಟ್ರ್ಯಾಪ್ ಆಗಿದೆ. ನಾನು ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಅದನ್ನ ಆಧರಿಸಿ ತನಿಖೆ ನಡೆಯಬೇಕು. ಸುಮಾರು 48 ರಾಜ್ಯ, ರಾಷ್ಟ್ರಮಟ್ಟದ ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎಂಬ ಸ್ಪೋಟಕ ವಿಚಾರವನ್ನ ರಾಜಣ್ಣ ಸದನದಲ್ಲಿ ತಿಳಿಸಿದ್ದಾರೆ.

ಒಬ್ಬರು, ಇಬ್ಬರು ಅಲ್ಲ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಚವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದರಲ್ಲಿ ಸಿಲುಕಿದ್ದಾರೆ. ಇಲ್ಲಿ ನಾನು ಮತ್ತು ಗೃಹ ಸಚಿವ ಪರಮೇಶ್ವರ್ ಇಬ್ಬರು ತುಮಕೂರಿನ ಸಚಿವರು ಇದ್ದೇವೆ. ನಾನು ಗೃಹ ಮಂತ್ರಿಗಳಿಗೆ ದೂರು ಕೊಡುತ್ತೇನೆ. ಅವರು ಈ ಬಗ್ಗೆ ವಿಶೇಷ ತನಿಖೆ ಮಾಡಲಿ. ಹನಿಟ್ರ್ಯಾಪ್ ಹಿಂದೆ ಇರುವ ಪ್ರೊಡ್ಯೂಸರ್, ಡೈರೆಕ್ಟರ್ ಹೊರಗೆ ಬರಲಿ ಎಂದಿದ್ದಾರೆ.

