ಬೆಂಗಳೂರು; ಸಚಿವ ಕೆ.ಎನ್.ರಾಜಣ್ಣ ಮೇಲೆ ಬಂದಿರುವ ಹನಿಟ್ರ್ಯಾಪ್ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಈಗಾಗಲೇ ಗೃಹಸಚಿವರಿಗೆ ದೂರನ್ನು ನೀಡಿದ್ದಾರೆ. ಇದೀಗ ಈ ಹನಿಟ್ರ್ಯಾಪ್ ಪ್ರಕರಣಕ್ಕೆ ಸಿಐಡಿ ಅಧಿಕಾರಿಗಳು ಎಂಟ್ರಿಯಾಗಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಅದರಲ್ಲೂ ಸರ್ಕಾರಿ ನಿವಾಸದಿಂದಲೇ ತನಿಖೆ ಪ್ರಾರಂಭಿಸಿದ್ದಾರೆ.

ಇನ್ನು ಸಿಐಡಿ ಅಧಿಕಾರಿಗಳು ರಾಜಣ್ಣ ಮನೆಯಲ್ಲಿಯೂ ಪರಿಶೀಲನೆ ನಡೆಸುತ್ತಿದ್ದಾರೆ. ಸಿಐಡಿ ಡಿಐಜಿ ವಂಶಿಕೃಷ್ಟ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿದ್ದು, ಸಿಐಡಿ ಎಸ್ಪಿ ರಾಘವೇಂದ್ರ, ಡಿವೈಎಸ್ಪಿ ಕೇಶವ್ ತಂಡ ಸಾಥ್ ನೀಡಿದೆ.

ರಾಜಣ್ಣ ಮನೆಗೆ ವಿಚಾರಣೆಗೆಂದು ಹೋದ ಸಿಐಡಿ ಅಧಿಕಾರಿಗಳು ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜಣ್ಣ ಅವರನ್ನು ಯಾರೆಲ್ಲಾ ಭೇಟಿ ಮಾಡಿದರು ಎಂಬುದನ್ನ ಹಾಜರಾತಿಯ ಲೆಡ್ಜರ್ ಬುಕ್ ನಲ್ಲೂ ಪರಿಶೀಲನೆ ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಶುರುವಾದ ಹಿನ್ನೆಲೆ ಸಿಐಡಿಗೆ ವಹಿಸಲಾಗಿದೆ.

ಹನಿಟ್ರ್ಯಾಪ್ ಕೇಸ್ ಪ್ರಕರಣ ಸಿಎಂ ಹಾಗೂ ಗೃಹ ಮಂತ್ರಿಗಳ ತೀರ್ಮಾನಕ್ಕೆ ಬಿಟ್ಟಿದ್ದು. ಅವರು ಏನೇ ತೀರ್ಮಾನ ತೆಗೆದುಕೊಂಡರು ಅದೇ ಫೈನಲ್ ಎಂದು ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕೇಸ್ ಗೆ ಸಂಬಂಧಿಸಿದಂತೆ ಕೆ.ಎನ್.ರಾಜಣ್ಣ ದೂರು ಕೊಡುವುದಕ್ಕೆ ಹೋಗಿರಲಿಲ್ಲ. ಆದರೆ ಗೃಹಮಂತ್ರಿಗಳು ನೀಡಿದ ಭರವಸೆಯಿಂದಾಗಿ ರಾಜಣ್ಣ ಅವರು ದೂರನ್ನ ನೀಡಿದರು. ಗೃಹಸಚಿವ ಜಿ.ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆಗೆ ಕೈ ಹಾಕಿದ್ದಾರೆ. ಗೃಹಸಚಿವರ ಸೂಚನೆಯ ಮೇರೆಗೆ ಸಿಐಡಿ ಅಧಿಕಾರಿಗಳು ಹನಿಟ್ರ್ಯಾಪ್ ಮೂಲವನ್ನ ತಡಕಾಡುತ್ತಿದ್ದಾರೆ. ಆರಂಭದಲ್ಲಿಯೇ ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾಗಲು ಯಾರೆಲ್ಲಾ ಬಂದಿದ್ದರು, ಅದರಲ್ಲೂ ಹೆಣ್ಣುಮಕ್ಕಳ ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

