ತುಮಕೂರು: ಈ ವರ್ಷ ಮಳೆ ಬರೋದು ಡೌಟಾಗಿದೆ, ಬೆಳೆ ಬೆಳೆಯೋದು ಡೌಟಾಗಿದೆ. ರೈತರ ಕಣ್ಣೀರ ಕಥೆ ಕೇಳೋರಿಲ್ಲದಂತಾಗಿದೆ. ಬೆಳಗ್ಗೆಯಿಂದ ಸಂಜೆ ತನಕ ಮೋಡ ನೋಡುವುದೇ ರೈತನ ಕೆಲಸವಾಗಿದೆ. ನಿನ್ನೆ ಕೊಂಚ ಮಟ್ಟಿಗೆ ತುಮಕೂರು ಜಿಲ್ಲೆಯಲ್ಲಿ ಮೋಡದಲ್ಲಿ ಮಳೆಯ ವಾತಾವರಣ ನಿರ್ಮಾಣವಾಗಿತ್ತು. ಆದರೆ ನೋಡ ನೋಡುತ್ತಲೇ ಮೋಡ ಸರಿದಿದೆ.

ಇದೀಗ ಜಿಲ್ಲೆಯಲ್ಲಿ ಮಳೆಯಿಲ್ಲದ ಕಾರಣ, ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ. ಹತ್ತು ತಾಲೂಕುಗಳು ಬರಪೀಡಿತ ಪ್ರದೇಶವಾಗಿದೆ. ವಾಡಿಕೆಯಂತೆ ಮಳೆ ಸುರಿಯದ ಕಾರಣ ಬೆಳೆ ನೆಲಕಚ್ಚಿದೆ. ಹೀಗಾಗಿ ತುಮಕೂರು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಪತ್ರದ ಮೂಲಕ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.

ತುಮಕೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಮಳೆ ಬೆಳೆ ಬೆಳೆಯುವ ಪ್ರದೇಶಗಳೆ ಹೆಚ್ಚಾಗಿರುವ ಕಾರಣ, ಮುಂದೇನು ಅಂತ ರೈತರಿಗೆ ಗೊತ್ತಾಗುತ್ತಿಲ್ಲ. ಈ ವರ್ಷ ಬೆಳೆ ಬೆಳೆಯದೆ ಹೋದಲ್ಲಿ ಒಂದು ವರ್ಷದ ದುಡಿಮೆ ಇಲ್ಲದಂತೆ ಆಗುತ್ತದೆ. ಹೀಗಾಗಿ ರೈತರು ಕಣ್ಣೀರಲ್ಲಿ ಮುಳುಗಿದ್ದಾರೆ. ಸರ್ಕಾರ ಮಾತ್ರ ಗ್ಯಾರಂಟಿಗಳ ಕಡೆಗೆ ಹೆಚ್ಚು ಗಮನ ಕೊಟ್ಟಿದೆಯೇ ವಿನಃ ರೈತರ ಸಮಸ್ಯೆಗಳು, ಮಳೆ ಕಡೆ ಗಮನವೇ ನೀಡುತ್ತಿಲ್ಲ.


