ಬೆಂಗಳೂರು : ದಲಿತ ಸಿಎಂ ವಿಚಾರ ರಾಜ್ಯದಲ್ಲಿ ಸದ್ದು ಮಾಡಿದಾಗೆಲ್ಲ ಜಿ ಪರಮೇಶ್ವರ್ ಅವರ ಹೆಸರೇ ಮುನ್ನೆಲೆಗೆ ಬರುತ್ತಾ ಇತ್ತು. ಪರಮೇಶ್ವರ್ ಅವರು ಕೂಡ ಆಗಾಗ ಸಿಎಂ ಆಗುವ ಆಸೆಯನ್ನು ಹೊರ ಹಾಕುತ್ತಿದ್ದರು. ಇದೀಗ ಮತ್ತೆ ಸಿಎಂ ವಿಚಾರವೇ ಸದ್ದು ಮಾಡುತ್ತಿದೆ.
ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳು ದಲಿತ ಸಚಿವರುಗಳಿಗೆ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಮೇಶ್ವರ್ ಅವರು, ನಾನು ಯಾಕೆ ಸಿಎಂ ಆಗಬಾರದು..? ಮುನಿಯಪ್ಪ ಯಾಕೆ ಆಗಬಾರದು..? ಮಹದೇವಪ್ಪ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಯಾಕೆ ಸಿಎಂ ಆಗಬಾರದು ಎಂದು ಹೇಳುತ್ತಾ ಇರುತ್ತೇನೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವೂ ಉಳಿದುಕೊಳ್ಳುತ್ತೇವೆ. ಅದನ್ನು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ಯಾವ ಸಾಧನೆಯನ್ನು ಮಾಡುವುದಕ್ಕೆ ಆಗುವುದಿಲ್ಲ. ನಮಗೆ ಸಿಎಂ ಆಗುವ ಅವಕಾಶಗಳನ್ನೇ ತಪ್ಪಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.