ತುಮಕೂರು: ಭಜರಂಗದಳದ ಕಾರ್ಯಕರ್ತನಾಗಿದ್ದ ಹರ್ಷ ಕೊಲೆಯಾದಾಗಿನಿಂದ ಹರ್ಷನ ಕುಟುಂಬಕ್ಕೆ ಸಾಕಷ್ಟು ಜನ ಸಹಾಯಕ್ಕೆ ನಿಂತಿದ್ದಾರೆ. ಇದೀಗ ಆತನ ಕುಟುಂಬಕ್ಕೆ ಎಂಎಲ್ಎ ಮತ್ತು ಎಂಪಿ ಟಿಕೆಟ್ ನೀಡಲಿ, ಈಶ್ವರಪ್ಪ ಟಿಕೆಟ್ ಬಿಟ್ಟುಕೊಡಲಿ ಎಂದು ಆಗ್ರಹಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿ ಎಂ ಇಬ್ರಾಹಿಂ ಕೂಡ ಒತ್ತಾಯಿಸಿದ್ದಾರೆ. ಈ ಸಂಬಂಧ ಹೃಗ ಸಚಿವ ಜ್ಞಾನೇಂದ್ರ ಮಾತನಾಡಿದ್ದು, ಮೃತಪಟ್ಟವರಿಗೆಲ್ಲಾ ಕಾಂಗ್ರೆಸ್ ಟಿಕೆಟ್ ನೀಡಿದ್ಯಾ ಎಂದು ಪ್ರಶ್ನಿಸಿದ್ದಾರೆ.
ಹರ್ಷನ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ. ಆದ್ರೆ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ. ಮಗನ ಪ್ರಾಣ ತಂದು ಕೊಡಿ ಎಂದು ಹೇಳಲ್ಲ. ಆದ್ರೆ ಅವನ ಸಾವು ಅರ್ಥಹೀನ ಆಗಬಾರದು. ಒಂದು ಉದ್ದೇಶಕ್ಕೋಸ್ಕರ ಅವನು ಸಾವನ್ನಪ್ಪಿದ್ದಾನೆ. ಅವನ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ತಾಯಿ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್ ಸುಖಾ ಸುಮ್ಮನೆ ಏನೇನೋ ಹೇಳ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನೀಟ್ ಪರೀಕ್ಷೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೇ ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವರು, ಆವತ್ತಿನ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಈ ರೀತಿಯ ಸಮಸ್ಯೆಯಾಗುತ್ತಿರಲಿಲ್ಲ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.