ಚಿತ್ರದುರ್ಗ,(ಏ.27) : ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೌರಕಾರ್ಮಿಕರು ಹಾಗೂ ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಿವೇಶನ ರಹಿತ ಪೌರಕಾರ್ಮಿಕರನ್ನು ಗುರುತಿಸಿ, ಖಾಲಿ ನಿವೇಶನಗಳ ಹಂಚಿಕೆಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಮಹಿಳಾ ಪೌರಕಾರ್ಮಿಕರಿಗಾಗಿ ಕಡ್ಡಾಯವಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಕೋರಲಾಗುವುದು. ಖಾಲಿ ಹುದ್ದೆಗಳಿಂದ ಪೌರಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹುದ್ದೆ ಭರ್ತಿಗೆ ಹಣಕಾಸು ಇಲಾಖೆಯ ಅನುಮತಿ ಪಡೆಯಲು ಆಯೋಗವು ಸಹಕಾರ ನೀಡಲಿದೆ.
ಪೌರಕಾರ್ಮಿಕರ ಹುದ್ದೆಗಳ ಭರ್ತಿಯ ರೋಸ್ಟರ್ ರದ್ದುಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಖಾಯಂ ನೇಮಕಾತಿಯಲ್ಲಿ ಪ್ರಕ್ರಿಯೆಯಲ್ಲಿ ನೇರ ವೇತನ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸೇವಾ ಹಿರಿತನದ ಮೇಲೆ ಪ್ರಾತಿನಿಧ್ಯನೀಡಬೇಕು ಎಂದರು.
ಮಾಸ್ಟರ್ ಹೆಲ್ತ್ ಚೆಕಪ್‍ಗೆ ಸೂಚನೆ: ಪೌರಕಾರ್ಮಿಕರು ಧೂಳು, ಅಸುರಕ್ಷಿತ ಸನ್ನಿವೇಶದಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಹೃದಯ, ಶ್ವಾಸಕೋಶ ಸೇರಿದಂತೆ ಗಂಭೀರ ಸ್ವರೂಪದದ ಕಾಯಿಲೆಗೆ ತುತ್ತಾಗುತ್ತಾರೆ. ನ್ಯಾಷನಲ್ ಸ್ಕೂಲ್ ಆಫ್ ಲಾ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ರಾಜ್ಯದ ಪೌರಕಾರ್ಮಿಕರ ಸರಾಸರಿ ಜೀವತಾವಧಿ 40 ರಿಂದ 45 ವರ್ಷಗಳಿಗಿದೆ. ಪೌರಕಾರ್ಮಿಕರ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಮಾಸ್ಟರ್ ಹೆಲ್ತ್ ಚೆಕಪ್‍ಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ತಿಳಿಸಿದರು.
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೀಡಿದಂತೆ, ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಸ್ವಚ್ಛತಾ ಕರ್ಮಿಗಳಿಗೆ ವಿಶೇಷ ಭತ್ಯೆ ನೀಡಲು ಸರ್ಕಾರಕ್ಕೆ ಕೋರಲಾಗಿದೆ. ಆಯೋಗ ಸೂಚಿಸಿದ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಿ, ಅನುಪಾಲನಾ ವರದಿ ಕಡ್ಡಾಯವಾಗಿ ನೀಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ವೇತನ ಪ್ರಮಾಣಪತ್ರಗಳನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ಸಭೆಗೂ ಮುನ್ನ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ, ಪೌರಕಾರ್ಮಿಕರ ಕುಂದುಕೊರತೆ ಆಲಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಿ.ಮಮತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ, ನಗರಸಭೆ ಆಯುಕ್ತರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.