ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.22) : ಪರಮ ಪವಿತ್ರವಾದ ರಂಜಾನ್ ಹಬ್ಬದ ಅಂಗವಾಗಿ ನಗರದ ದಾವಣಗೆರೆ ರಸ್ತೆಯಲ್ಲಿರುವ ದೊಡ್ಡ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮಧ್ಯಾಹ್ನದ ಮೇಲೆ ಬಿಸಿಲಿನ ದಗೆ ಜಾಸ್ತಿಯಾಗುತ್ತದೆನ್ನುವ ಕಾರಣಕ್ಕಾಗಿ ಬೆಳಿಗ್ಗೆ ಎಂಟು ಗಂಟೆಗೆ ದೊಡ್ಡ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ತೊಡಗಿದರು.
ಹಸಿವು, ಬಡತನದ ಸಂಕಟ ಏನೆಂದು ತಿಳಿದುಕೊಳ್ಳುವುದಕ್ಕಾಗಿ ಮೂವತ್ತು ದಿನಗಳ ಕಾಲ ಒಂದೊತ್ತು ಉಪವಾಸ ಮಾಡುವುದು ರಂಜಾನ್ ಹಬ್ಬದ ಮಹತ್ವ. ಹಿರಿಯರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳು ತಲೆಗೆ ಟೋಪಿ ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಮನೆಯಿಂದಲೆ ಕೆಲವರು ಚಾಪೆ ಹಾಗೂ ಜಮಖಾನ ತೆಗೆದುಕೊಂಡು ಹೋಗಿ ದೊಡ್ಡ ಈದ್ಗಾ ಮೈದಾನದಲ್ಲಿ ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಪ್ರಾರ್ಥನೆಯ ನಂತರ ಪರಸ್ಪರರು ರಂಜಾನ್ ಹಬ್ಬದ ಶುಭಾಷಯಗಳನ್ನು ಹಂಚಿಕೊಂಡರು.
ಗಾಂಧಿವೃತ್ತ, ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದ ಸಮೀಪ ಹಾಗೂ ದೊಡ್ಡ ಈದ್ಗಾ ಮೈದಾನದ ಹತ್ತಿರ ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ರಸ್ತೆಗೆ ಅಡ್ಡ ಇಟ್ಟು ಸಂಚಾರ ದಟ್ಟಣೆಯಾಗುವುದನ್ನು ಪೊಲೀಸರು ನಿಯಂತ್ರಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಮುಸ್ಲಿಂ ಮುಖಂಡರುಗಳಾದ ಬಿ.ಕೆ.ರಹಮತ್‍ವುಲ್ಲಾ, ಎಂ.ಕೆ.ತಾಜ್‍ಪೀರ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಕೆ.ಅನ್ವರ್‍ಪಾಷ, ಜಿಲ್ಲಾ ವಕ್ಫ್‍ಬೋರ್ಡ್ ಅಧ್ಯಕ್ಷ ಎಂ.ಸಿ.ಓ.ಬಾಬು ಸೇರಿದಂತೆ ಇನ್ನು ಅನೇಕರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯರವರ ಪತಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಬಿ.ಇ. ಎಸ್.ಡಿ.ಪಿ.ಐ.ನಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಬಾಳೆಕಾಯಿ ಶ್ರೀನಿವಾಸ್ ಇವರುಗಳು ಪ್ರಾರ್ಥನೆಯಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಕೋರಿದರು.