ಸುದ್ದಿಒನ್, ಹೊಳಲ್ಕೆರೆ,ಅಕ್ಟೋಬರ್.31 : ಭಾರತ ದೇಶ ನಮ್ಮೆಲ್ಲರ ಜನ್ಮಭೂಮಿ. ಭಾರತದ ಏಕತೆ ಹಾಗು ಅಖಂಡತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯ ಶಿಕ್ಷಕರಾದ ಡಿ.ಸಿದ್ದಪ್ಪ ಹೇಳಿದರು.
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸರದಾರ ವಲ್ಲಭಬಾಯಿಯವರ ಜನ್ಮದಿನ ಹಾಗು ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಳಲ್ಕೆರೆ | ಅಮೃತಾಪುರದಲ್ಲಿ ರಾಷ್ಟ್ರಿಯ ಏಕತಾ ದಿನಾಚರಣೆ pic.twitter.com/dPtBeJGXBp
— suddione-kannada News (@suddione) October 31, 2023
ಸ್ವಾತಂತ್ರ್ಯ ಪೂರ್ವದಲ್ಲಿ ಹಾಗು ನಂತರದಲ್ಲಿ ಭಾರತ ದೇಶ ಬ್ರಿಟೀಷರು, ಪ್ರೆಂಚರು, ಪೋರ್ಚುಗೀಸರು ಮತ್ತು ವಿವಿಧ ದೇಶೀಯ ರಾಜರ ಸಂಸ್ಥಾನಗಳ ಆಳ್ವಿಕೆಯಲ್ಲಿ ಛಿದ್ರವಾಗಿದ್ದಿತು. ಇದನ್ನು ಹಿಡಿಯಾಗಿ ಒಂದು ಮಾಡಿ ಭಾರತ ಗಣರಾಜ್ಯ ಸ್ಥಾಪಿಸಿ, ಭಾರತದ ನೆಲ ಜಲಕ್ಕೆ ಭದ್ರತೆ ಹಾಗು ಎಲ್ಲ ಭಾರತ ನಿವಾಸಿಗಳಿಗೆ ರಕ್ಷಣೆ ಮತ್ತು ಗೌರವ ತಂದುಕೊಟ್ಟ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಸರದಾರ ವಲಭಬಾಯಿಯವರು.
ಭಾರತ ಸರ್ಕಾರದ ಮೊದಲ ಗೃಹ ಮಂತ್ರಿಗಳಾದ ಅವರು ದೇಶದ ಸಾರ್ವಭೌಮತೆ ಕಾಪಾಡಲು ಸುಸಜ್ಜಿತ ಸೈನ್ಯ ಹಾಗು ದಕ್ಷ ರಾಷ್ಟ್ರೀಯ ಪೋಲೀಸ್ ವ್ಯವಸ್ಥೆಯನ್ನು ನಿರ್ಮಿಸಿದರು. ಇಂದಿಗು ಭಾರತ ವಿಶ್ವದಲ್ಲಿ ಬಲಾಢ್ಯ ಸೇನೆ ಹೊಂದಿ ದೇಶದ ಗಡಿಗಳಲ್ಲಿ ಶತೃದಾಳಿಗಳ ಹಿಮ್ಮೆಟ್ಟಿಸುತ್ತ ಭಾರತದ ನೆಲ ಜಲ ರಕ್ಷಿಸುತ್ತಿವೆ. ಭಾರತದ ದೇಶವಾಸಿಗಳಾದ ನಾವೆಲ್ಲ ಸುರಕ್ಷಿತವಾಗಿ ನಮ್ಮ ಕೆಲಸ ಕಾರ್ಯಗಳ ಮಾಡುತ್ತ ಸಂತಸದ ಜೀವನ ನಡೆಸುತ್ತಿದ್ದೇವೆ. ಇದಕ್ಕೆ ಕಾರಣಪುರುಷರಾದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸೋಣ ಎಂದರು.
ಏಕತಾ ದಿನದ ಪ್ರತಿಜ್ಞಾ ವಿಧಿಯನ್ನು ಸಹಶಿಕ್ಷಕಿ ಜಿ.ಎನ್.ರೇಷ್ಮಾರವರು ವಿದ್ಯಾರ್ಥಿಗಳಿಗೆ ಬೋಧಿಸಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗು ವಂದೇಮಾತರಂ ಹಾಡಿದರು. ಕಾರ್ಯಕ್ರಮದಲ್ಲಿ ಟಿ.ಪಿ.ಉಮೇಶ್, ಅಂಗನವಾಡಿ ಶಿಕ್ಷಕಿ ಜ್ಯೋತಿ ಕಾಶಿಪುರ, ಅಡಿಗೆ ಸಹಾಯಕರಾದ ತಿಮ್ಮಮ್ಮ, ಶಾರದಮ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.