ಹೊಳಲ್ಕೆರೆ | ಅಮೃತಾಪುರ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಣೆ

1 Min Read

 

ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 18 : ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು ಜಾತಿಯ ಮದದಲ್ಲಿ ಮನುಷ್ಯರನ್ನು ಕೀಳಾಗಿ ಕಾಣುತ್ತಿದ್ದ ಸಮಾಜದ ಉನ್ನತ ವರ್ಗದವರನ್ನು ದಿಟ್ಟತನದಲ್ಲಿ ಪ್ರಶ್ನಿಸುವ ಛಲ ತೋರಿದವರು ಕನಕದಾಸರು. ಕುಲದ ಮದವ ಅಡಗಿಸಲು ಅಹರ್ನಿಶಿ ಶ್ರಮಿಸಿದ ಜಾತ್ಯಾತೀತ ವ್ಯಕ್ತಿ ಕನಕದಾಸರು ಎಂದು ಸಹಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.

ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಸಮೀಪದ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂತಶ್ರೇಷ್ಟ ಕನಕದಾಸರ ಜನ್ಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು ಬಾಡದ ನಾಯಕರಾಗಿದ್ದರು ಹಮ್ಮು ಹಗೆಗಳ ತೋರದವರು ದರ್ಪ ದೌರ್ಜನ್ಯ ಎಸಗದ ಅನನ್ಯ ವ್ಯಕ್ತಿತ್ವ ಕನಕದಾಸರದಾಗಿತ್ತು. ಪ್ರಜೆಗಳ ಕಲ್ಯಾಣಕ್ಕೆ ಶ್ರೇಯೋಭಿವೃದ್ಧಿಗೆ ಧನಕನಕಗಳ ಧಾರೆಯೆರೆದು ತಿಮ್ಮಪ್ಪನಾಯಕ ಕನಕನಾಯಕರಾದರು. ಮುಂದೆ ವೈರಾಗ್ಯ ತಪೋನಿಧಿಯಾಗಿ ಕನ್ನಡ ನಾಡಿನ ಕನಕದಾಸರಾದರು. ಜನರನ್ನು ನೀತಿ ಮಾರ್ಗದಿ ನಡೆಸಲು ಕೀರ್ತನೆಗಳ ರಚಿಸಿ ಹಾಡಿದರು. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ನಳಚರಿತ್ರೆ ಕಾವ್ಯಕೃತಿಗಳ ರಚಿಸಿ ಶ್ರೇಷ್ಟ ಕನ್ನಡ ಕೃತಿಕಾರರಾಗಿ ನಾಡಿನ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ. ಇಂದಿನ ಮಕ್ಕಳು ಕನಕರ ಸರಳತೆ, ಜಾತ್ಯಾತೀತ ಭಾವನೆ, ಅಧ್ಯಯನಶೀಲತೆ, ಬರವಣಿಗೆ ಕಲೆ ರೂಢಿಸಿಕೊಂಡು ನಾಡಿಗೆ ಕೀರ್ತಿ ತರುವಂತವರಾಗಬೇಕು ಎಂದು ತಿಳಿಸಿದರು.

ಕನಕದಾಸರ ಕೀರ್ತನೆಗಳನ್ನು ಶಾಲಾ ವಿದ್ಯಾರ್ಥಿಗಳಾದ ಆರ್.ದೀಕ್ಷಾ, ಲಕ್ಷ್ಮಿದೇವಿ ಹಾಡಿದರು, ಕನಕರ ಭಾವಚಿತ್ರಗಳನ್ನು ವಿದ್ಯಾರ್ಥಿಗಳಾದ ಮಾರುತಿ, ತರುಣ, ಕೆ.ಉಷ, ಡಿ.ದೀಕ್ಷಾ ರಚಿಸಿದರು. ಕನಕರ ವ್ಯಕ್ತಿತ್ವ ಕುರಿತು ತನುಶ್ರೀ, ದೀಪ, ಮಾನಸ, ಅನಿತ, ಲಿಂಗರಾಜ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ಡಿ.ಸಿದ್ಧಪ್ಪ, ಸಹಶಿಕ್ಷಕರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ, ಅಕ್ಷರ ದಾಸೋಹ ಕಾರ್ಯಕರ್ತರಾದ ತಿಮ್ಮಕ್ಕ, ಶಾರದಮ್ಮ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *