Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಳಲ್ಕೆರೆ: ಮಹಿಳೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : ಆರೋಪಿ ಬಂಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ಹೊಳಲ್ಕೆರೆ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ಗೋಮಾಳ ಜಾಗದಲ್ಲಿ ಬೆಳೆದಿದ್ದ ಗಿಡಗಳ ಮಧ್ಯೆ ಅನಾಮದೇಯ ಮಹಿಳೆಯ ಕೊಲೆ ನಡೆದ ಪ್ರಕರಣವನ್ನು ಹೊಳಲ್ಕೆರೆ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೊಮ್ಮನಕಟ್ಟೆ ಗ್ರಾಮದ ಗೋಮಾಳ ಜಾಗದಲ್ಲಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅನಾಮದೇಯ ಮಹಿಳೆಯೊಬ್ಬಳ ತಲೆಯ ಬಲಭಾಗಕ್ಕೆ ಹಾಗೂ ಬಲಕಿವಿಗೆ ಯಾವುದೋ ಆಯುಧದಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿರುವ ಬಗ್ಗೆ ದಿನಾಂಕ 29.09.2026 ರಂದು ಚಿರಂಜೀವಿ ಎಲ್ ಎಂಬುವವರು ನೀಡಿದ ದೂರಿನ ಮೇರೆಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 267/2026 ಕಲಂ: 103[1], 238 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರೆಸಿದ ತನಿಖಾಧಿಕಾರಿಗಳು ಮೃತ ಮಹಿಳೆಯನ್ನು ಭದ್ರಾವತಿ ತಾಲ್ಲೂಕಿನ ಜಯಮ್ಮ ಎಂದು ಗುರುತಿಸಿದ್ದರು.

ಪ್ರಕರಣದ ಆರೋಪಿತನ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಸಿ, ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಶಿವಕುಮಾರ್ ಆರ್., ಕೆ.ಎಸ್.ಪಿ.ಎಸ್. ಮತ್ತು ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕರಾದ ಶ್ರೀಶೈಲ ಜಿ. ಚೌಗುಲಾ, ಹೊಳಲ್ಕೆರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ವಿಶ್ವನಾಥ ಜಿ.ಎನ್. ಹಾಗೂ ಸಿಬ್ಬಂದಿಗಳಾದ ಪಿ. ಮಂಜುನಾಥ, ಬಸವರಾಜು, ತಿಮ್ಮೇಶ, ನಿರಂಜನ, ಚಂದ್ರಪ್ಪ, ಲೋಕೇಶ, ರವಿಕುಮಾರ, ತಿಮ್ಮಣ್ಣ, ಸಿದ್ದಪ್ಪ, ಮಂಜಯ್ಯ, ತುಕಾರಾಂಬಾಬು ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಯವರಾದ ಪ್ರಕಾಶ್, ಸತೀಶ್, ರಘು ಕಾರ್ಯನಿರ್ವಹಿಸಿದ್ದರು.

ಸದರಿ ತನಿಖಾ ತಂಡವು ಹಲವು ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ, ಗುಂಡೇರಿ ಕಾವಲು ಗ್ರಾಮದ ರಂಗಸ್ವಾಮಿ ಆರ್. ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತು. ವಿಚಾರಣೆ ವೇಳೆ ಆರೋಪಿ ರಂಗಸ್ವಾಮಿಯು ಮೃತ ಜಯಮ್ಮಳೊಂದಿಗೆ ಕಳೆದ 4-5 ತಿಂಗಳಿನಿಂದ ಅನೈತಿಕ ಸಂಬಂಧ ಹೊಂದಿದ್ದು, ಇತ್ತೀಚೆಗೆ ಆಕೆಯ ನಡತೆ ಬಗ್ಗೆ ಅನುಮಾನಗೊಂಡು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಆಕೆ ಲೆಕ್ಕಿಸದ ಕಾರಣ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಯೋಜನೆಯಂತೆ ದಿನಾಂಕ 27.09.2026 ರಂದು ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿ ಗೇಟ್ನಿಂದ ಆಕೆಯನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು, ಸಂಜೆ ವೇಳೆಗೆ ಬೊಮ್ಮನಕಟ್ಟೆ ಗೇಟ್ ಬಳಿಯಿರುವ ಗೋಮಾಳ ಜಮೀನಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕುತ್ತಿಗೆಗೆ ಕೈಯಿಂದ ಹೊಡೆದು, ನಂತರ ಸ್ಥಳದಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಜಯಮ್ಮಳ ಕಿವಿ ಹಾಗೂ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಕೃತ್ಯಕ್ಕೆ ಬಳಸಿದ ಕಲ್ಲನ್ನು ಎಸೆದು ಪರಾರಿಯಾಗಿದ್ದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಸಿ, ಐ.ಪಿ.ಎಸ್. ಅವರು ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now