ಎಚ್.ಆಂಜನೇಯ ಅವರಿಗೆ ಹೊಳಲ್ಕೆರೆ ಕಾಂಗ್ರೆಸ್ ಟಿಕೆಟ್ : ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಜನರ ಒಲವು ಎಂದ ಮಾಜಿ ಸಚಿವ

3 Min Read

 

 

ಚಿತ್ರದುರ್ಗ, (ಏಪ್ರಿಲ್ 06) :  ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಗೆ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮತದಾನದ ದಿನಗಣನೆಗೆ  ಕಾತುರದಿಂದ ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ ಹೊಳಲ್ಕೆರೆ ಕ್ಷೇತ್ರಕ್ಕೆ ತಮ್ಮ ಹೆಸರು ಘೋಷಣೆ ಆಗುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಕರೆ ಮೇರೆ ಪ್ರಚಾರ ಕಾರ್ಯದ ಒತ್ತಡದ ಮಧ್ಯದಲ್ಲೂ ಬಿಡುವು ಮಾಡಿಕೊಂಡು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊಳಲ್ಕೆರೆ ಕ್ಷೇತ್ರದಲ್ಲಿ ಚಂದ್ರಪ್ಪ ಅವರ ದುರ್ವತನೆ, ಅಹಂಕಾರಕ್ಕೆ ಗುತ್ತಿಗೆದಾರರು, ಅಧಿಕಾರಿಗಳು, ಸಾಮಾನ್ಯ ಜನರು ಬೇಸತ್ತಿದ್ದಾರೆ. ಇಪ್ಪತ್ತು ದಿನಗಳಿಂದ ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಬೇಟಿ ನೀಡಿದ್ದ ಸಂದರ್ಭ, ಜನರೇ ಶಾಸಕರ ದುರ್ವಾತನೆ ಹೇಳಿಕೊಳ್ಳುತ್ತಿದ್ದು, ಚುನಾವಣೆಗೆ ನಿಲ್ಲುವಂತೆ ನನ್ನ ಮೇಲೆ ಒತ್ತಡ ತರುತ್ತಿದ್ದರು ಎಂದರು.

ಈ ಮಧ್ಯೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆ ಆಗಿರಲಿಲ್ಲ. ಇದಕ್ಕೆ ಕಾರಣ ಏನೆಂಬುದು ನನಗೂ ಮತ್ತು ಹೈಕಮಾಂಡ್ ಮಾತ್ರವೇ ಗೊತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಐವತ್ತು ವರ್ಷದ ನನ್ನ ಪಕ್ಷ ನಿಷ್ಠೆ, ಸಂಘಟನೆ, ಬದ್ಧತೆ ಗುರುತಿಸಿ ಅನೇಕ ಸ್ಥಾನಮಾನ ನೀಡಿದೆ. ನಿರೀಕ್ಷೆಯೇ ಇಲ್ಲದಿದ್ದ ಸಂದರ್ಭದಲ್ಲಿ ಬಹುದೊಡ್ಡ ಸಮಾಜ ಕಲ್ಯಾಣ ಖಾತೆ ಸಚಿವನಾಗಿ ಐದು ವರ್ಷ ಆಡಳಿತ ನಡೆಸಿ, ಅನೇಕ ಜನಪರ ಯೋಜನೆ ಜಾರಿಗೆ ಅನುವು ಮಾಡಿಕೊಟ್ಟಿದೆ. ಈಗಲೂ ಟಿಕೆಟ್ ನೀಡುವ ಮೂಲಕ ಶಿಸ್ತಿನ ಸಿಫಾಯಿಗಳನ್ನು ಗೌರವದಿಂದ ಪಕ್ಷ ನಡೆಸಿಕೊಳ್ಳುತ್ತದೆ ಎಂಬ ಸಂದೇಶ ನೀಡಿದೆ ಎಂದರು.

ಟಿಕೆಟ್‌ಗಾಗಿ ದೆಹಲಿ, ಬೆಂಗಳೂರಲ್ಲಿ ಬೀಡುಬಿಟ್ಟು ಯಾವುದೇ ಲಾಭಿ ಮಾಡದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ಸುತ್ತಾಟ ನಡೆಸುತ್ತಿದ್ದ ನನ್ನ ಪಕ್ಷ ನಿಷ್ಠೆ, ತಾಳ್ಮೇ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸುತ್ತೇನೆ ಎಂಬ ನನ್ನ ಸಂದೇಶ ಹಾಗೂ ಕ್ಷೇತ್ರದಲ್ಲಿ ಎಐಸಿಸಿ, ಕೆಪಿಸಿಸಿ ನಡೆಸಿದ ಸರ್ವೇ ವರದಿ ಆಧಾರದಲ್ಲಿ ಪಕ್ಷ ನನಗೆ ಟಿಕೆಟ್ ನೀಡಿದೆ ಎಂದು ಹೇಳಿದರು.

ಬಹಳ ಜನ ಆಕಾಂಕ್ಷಿಗಳು ಇದ್ದರು. ಅವರೆಲ್ಲರಿಗೂ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ದಿನವೇ ಶುಭಾಷಯ ಕೋರಿದ್ದೇ. ನೀವು ಕೂಡ ಪ್ರಭುತ್ವಕ್ಕೆ ಬರಬೇಕು ಎಂದು ತಿಳಿಸಿದ್ದೇ. ಆದರೆ, ಪಕ್ಷ ಕ್ಷೇತ್ರದಲ್ಲಿ ಕೊನೇ ಗಳಿಗೆಯಲ್ಲಿ ನಡೆಸಿದ ಸರ್ವೇ ಆಧಾರದಡಿ ನನಗೆ ಟಿಕೆಟ್ ನೀಡಿದೆ ಎಂದರು.

ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಇದೇ ಕಾರಣಕ್ಕೆ ಟಿಕೆಟ್‌ಗಾಗಿ ಅರ್ಜಿ ಆಹ್ವಾನಿಸುತ್ತದೇ. ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಟಿಕೆಟ್‌ಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ನನಗೆ ಟಿಕೆಟ್ ನೀಡಲೇಬೇಕೆಂದು ಒತ್ತಾಯ ಮಾಡಬಹುದು. ಪಕ್ಷ ಅದನ್ನು ತಾಳ್ಮೇಯಿಂದ ಕೇಳಿಸಿಕೊಂಡು, ಗೆಲ್ಲುವ ಹಾಗೂ ಪಕ್ಷ ನಿಷ್ಠೆ ಎರಡನ್ನು ಗಮನಿಸಿ ತೀರ್ಮಾನ ಕೈಗೊಳ್ಳುತ್ತದೆ. ಅದನ್ನು ನಾನು ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.

ಒಂದೊಮ್ಮೆ ಬೇರೆ ಯಾರಿಗಾದ್ರೂ ಪಕ್ಷ ಟಿಕೆಟ್ ನೀಡಿದ್ದರೆ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲು ಸಿದ್ಧನಿದ್ದೇ. ಇದೇ ಕಾರಣಕ್ಕೆ ನನಗೆ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಆಗದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬೆಂಬಲಿಗರು ವರಿಷ್ಠರ ಮೇಲೆ ಒತ್ತಡ ತರಲು ಮುಂದಾದಾಗ ಸುಮ್ಮನಿರಿಸಿದ್ದೇ. ಯಾರಿಗೆ ಪಕ್ಷ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಸಿದ್ಧರಿರಬೇಕು ಎಂದು ಹೇಳಿದ್ದೆ. ನಾನು ಕೂಡ ದೆಹಲಿ, ಬೆಂಗಳೂರಿಗೆ ಹೋಗದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇ ಎಂದು ತಿಳಿಸಿದರು.

ರಾಜ್ಯದಲ್ಲಿ ಭಾರತೀಯ ಪಕ್ಷದ ದುರಾಡಳಿತ, ಭ್ರಷ್ಟಾಚಾರದಿಂದ ಜನತೆ ತೀವ್ರ ಮನನೊಂದಿದ್ದಾರೆ. ಪಕ್ಷಕ್ಕೆ ಬಹುಮತ ನೀಡದಿದ್ದರೂ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಪಕ್ಷದ ಕುರಿತು ಅಸಮಾಧಾನ ಇದೆ. ಆದ್ದರಿಂದ ಈ ಬಾರಿ ನಿರೀಕ್ಷೆ ಮೀರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಿದ್ಧರಾಗಿದ್ದಾರೆ. ಇನ್ನೂ ಹೊಳಲ್ಕೆರೆ ಕ್ಷೇತ್ರದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಚಂದ್ರಪ್ಪನ ಭ್ರಷ್ಟಾಚಾರ, ದುರಾಹಂಕಾರಕ್ಕೆ ಮನನೊಂದಿದ್ದು, ಆತನನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಕಚೇರಿ ಬಳಿ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *