ಹಿರಿಯೂರು | ಆದಿವಾಲ ಬಳಿ ತರಕಾರಿ, ಹಣ್ಣುಗಳ ಮಂಡಿ ಉದ್ಘಾಟನೆ

1 Min Read

ಸುದ್ದಿಒನ್, ಹಿರಿಯೂರು, ಡಿಸೆಂಬರ್. 04 : ತಾಲೂಕಿನ ಆದಿವಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಹಿರಿಯೂರು ಜೈ ಕಿಸಾನ್ ಟೊಮ್ಯಾಟೋ ತರಕಾರಿ ಮತ್ತು ಹಣ್ಣು ಕಮಿಷನ್ ಮಂಡಿಯನ್ನು ಉದ್ಘಾಟಿಸಲಾಯಿತು.

ತರಕಾರಿ ಮಂಡಿಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ. ಸಿ.ಹೊರಕೇರಪ್ಪ ಮಾತನಾಡಿ ಬಯಲು ಸೀಮೆ ಜಿಲ್ಲೆಯಲ್ಲಿನ ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಂತೆ ಆದಿವಾಲ ಗ್ರಾಮದ ಬಳಿ ನೂತನವಾಗಿ ಟೊಮೋಟೊ ಮಂಡಿ ಶುರುವಾಗಿರುವುದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೋಟೊ ಹಣ್ಣು ಬೆಳೆ ಬೆಳೆಯುತ್ತಿದ್ದು ಈ ಟೊಮೋಟೊ ಮಾರುಕಟ್ಟೆ ರೈತರಿಗೆ ವರದಾನವಾಗಲಿದೆ. ಟೊಮೋಟೊ ಬೆಳೆ ಬೆಳೆದ ರೈತರು ದುಬಾರಿ ವೆಚ್ಚ ಖರ್ಚು ಮಾಡಿ ಕೋಲಾರ ಜಿಲ್ಲೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದು ಇದರಿಂದಾಗಿ ರೈತರಿಗೆ ದುಬಾರಿ ವೆಚ್ಚ ತಗುಲುತ್ತಿತ್ತು. ಆದರೆ ಇಂದು ತಾಲೂಕಿನಲ್ಲಿ ನೂತನ ಮಂಡಿ ಆಗಿರುವುದರಿಂದ ರೈತರಿಗೆ ಸಾಗಾಟದ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ. ತರಕಾರಿ, ಹಣ್ಣು ಹಂಪಲು ಇತರೆ ಬೆಳೆಗಳನ್ನು ಇದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ.ಈ ಮಂಡಿಗೆ ಕೋಲಾರ, ಚಿಕ್ಕಮಗಳೂರು,ಅನಂತಪುರ, ಬಾಣಾವರ ಇತರೆ ಕಡೆಯಿಂದ ಬಿಡ್ ದಾರರರು ಆಗಮಿಸಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಬಿಡ್ ದಾರರನ್ನು ಕರೆಸುವಂತೆ ಅವರು ಮನವಿ ಮಾಡಿದರು.

ಮೊದಲ ದಿನ ಮಾರುಕಟ್ಟೆಯಲ್ಲಿ ಸುಮಾರು 1,500 ಬಾಕ್ಸ್ ಟೊಮೋಟೊ ಬಂದಿದ್ದು 1 ನೇ ಕ್ವಾಲಿಟಿ 400 ರಿಂದ 570 ರೂ, 2 ನೇ ಕ್ವಾಲಿಟಿ 160 ರಿಂದ 250 ರೂಗಳಿಗೆ ಮಾರಾಟವಾಯಿತು.

ಈ ಸಂದರ್ಭದಲ್ಲಿ ಮಂಡಿ ಮಾಲೀಕರಾದ ಕಿಸಾನ್ ಸಯದುಲ್ಲ ಖಾನ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮದ್ ಫಕ್ರುದ್ದೀನ್, ಸೈಯದ್ ಇರ್ಷದ್ ಮೌಲಾನ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮಿಕಾಂತ್, ರಾಜಶೇಖರ್, ತಿಪ್ಪೇಸ್ವಾಮಿ, ಅನ್ಸರ್ ಅಲಿ, ರಿಜ್ವಾನ್ ಖಾನ್, ನೋಟರಿ ಷಾ ನವಾಜ್, ತ್ರಿಯಂಬಕ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Share This Article