ಸುದ್ದಿಒನ್, ಚಿತ್ರದುರ್ಗ, ಡಿ.11: ಬಯಲುಸೀಮೆಯ ಏಕೈಕ ಜೀವನಾಡಿ, ಮೈಸೂರು ರಾಜರು ಕೊಟ್ಟ ಕೊಡುಗೆ ವಾಣಿ ವಿಲಾಸ ಸಾಗರ ಜಲಾಶಯ ಕೊನೆಗೂ ಮೂರನೇ ಬಾರಿಗೆ ಭರ್ತಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಕೋಡಿ ಬೀಳಲಿದ್ದು 3ನೇ ಬಾರಿಗೆ 130 ಅಡಿ ನೀರು ತುಂಬುವ ಮೂಲಕ ಡ್ಯಾಂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ಜನವರಿ 11/01/2025ರ ಹೊತ್ತಿಗೆ 130 ಅಡಿ ಮುಟ್ಟಿದೆ. ಕೇವಲ 6 ತಿಂಗಳಲ್ಲಿ ಸುಮಾರು 17 ಅಡಿಯಷ್ಟು ನೀರು ಸಂಗ್ರಹವಾಗಿದ್ದು ಪ್ರಸ್ತುತ 30.422 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ.
ಅನೇಕ ದಿನಗಳಿಂದ ಭದ್ರಾ ನೀರು ವಿವಿ ಸಾಗರ ಜಲಾಶಯಕ್ಕೆ ಹರಿಯುತ್ತಿದ್ದ ಪರಿಣಾಮ ಇಂದು-ನಾಳೆ ಕೋಡಿ ಬೀಳಬಹುದು ಎಂಬ ಕುತೂಹಲ ಜನರಲ್ಲಿ ಮನೆ ಮಾಡಿತ್ತು. ಪ್ರತಿದಿನವೂ ಜನರ ಗಮನ ಅದರ ಕಡೆ ಇತ್ತು. ಈ ಮಧ್ಯೆ ಕೋಡಿಬಿದ್ದೇ ಬಿಟ್ಟಿತು ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಎರಡೂವರೆ ವರ್ಷದ ಹಿಂದಿನ ವಿಡಿಯೋ ಹರಿದಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿತ್ತು.
ಒಟ್ಟಿನಲ್ಲಿ 2022ರಲ್ಲಿ ಕೋಡಿಬಿದ್ದ ನಂತರ ಕೇವಲ ಎರಡೂವರೆ ವರ್ಷದ ಅಂತರದಲ್ಲಿ ಮತ್ತೊಮ್ಮೆ ಕೋಡಿ ಬೀಳುತ್ತಿರುವುದು ಜಿಲ್ಲೆಯ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
2022ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲು ಆಗಮಿಸಿದ್ದರು. ಈ ಬಾರಿ ಈಗಿನ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಅನೇಕ ಸಚಿವರ ದಂಡು ಆಗಮಿಸಲಿದೆ. ಈಗಾಗಲೇ ಡಿ.ಸುಧಾಕರ್ ಅನೇಕರನ್ನು ಆಹ್ವಾನಿಸಿದ್ದು, ಜಿಲ್ಲಾಡಳಿತ ಸಿದ್ಧತೆ ಕೂಡ ಕೈಗೊಂಡಿದೆ. ಜ.18 ಅಥವಾ 19ರಂದು ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಏನೇ ಇರಲಿ ವಿವಿ ಸಾಗರ ಜಲಾಶಯ ಮೈದುಂಬಿ ಹರಿಯಲಿದ್ದು ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.