ಸುದ್ದಿಒನ್, ಹಿರಿಯೂರು, ಜುಲೈ. 21 : ತಾಲೂಕಿನ ಗುಯಿಲಾಳು ಟೋಲ್ ಬಳಿ ಇರುವ ಶ್ರೀ ಸದ್ಗುರು ಸಾಯಿ ದತ್ತಾಶ್ರಮದಲ್ಲಿ ಭಾನುವಾರ ಗುರು ಪೌರ್ಣಮಿ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಗುರು ಪೌರ್ಣಮಿ ಅಂಗವಾಗಿ ಸಾಯಿಮಂದಿರಲ್ಲಿ ಬೆಳಿಗ್ಗೆ ಗಂಗಾಪೂಜೆ ಯೊಂದಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ಬಾಬಾ ಅವರಿಗೆ ಅಭಿಷೇಕ, ಅಲಂಕಾರ ಪಂಚಾಮೃತ ಅಭಿಷೇಕ, ವ್ಯಾಸ ಪೂಜೆ, ಸದ್ಗುರು ಪೂಜೆ, ಕುಂಭಾಭಿಷೇಕ, ಸಂಜೆ ಆರತಿ, ಶ್ರೀ ಬಾಬಾರ ಪಾದಸ್ಪರ್ಶ, ಶೇಜ ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಗುರು ಪೌರ್ಣಮಿ ಮಹೋತ್ಸವ ಅಂಗವಾಗಿ ಸಾಯಿ ದತ್ತಾಶ್ರಮದಲ್ಲಿ ವಿವಿಧ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಾಳೆ ಕಂದು, ಮಾವಿನ ತಳಿರು ತೋರಣಗಳಿಂದ ಅಲಂಕರಿಸಿದ್ದರು. ಶ್ರೀ ಸಾಯಿ ದತ್ತಾಶ್ರಮದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಾವಿರಾರು ಭಕ್ತರು ಗುರು ಪೌರ್ಣಮಿ ಮಹೋತ್ಸವ ಪೂಜೆಯಲ್ಲಿ ಪಾಲ್ಗೊಂಡು ಬಾಬಾರ ದರ್ಶನ ಪಡೆದರು. ನೆರೆದಿದ್ದ ಭಕ್ತರಿಗೆ
ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಹಿಳೆಯರಿಂದ ಭಜನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್. ಆರ್. ತಿಮ್ಮಯ್ಯ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ. ಯಶೋಧರ, ಜೆಜೆ ಹಳ್ಳಿ ಮಂಜುನಾಥ್, ವಕೀಲ ಬಬ್ಬೂರು ಸುರೇಶ್, ಬಿ. ರಾಜಶೇಖರ್, ಶಿಡ್ವಯ್ಯನಕೊಟೆ ಮಲ್ಲಿಕಾರ್ಜುನಪ್ಪ, ಗಿಡ್ಡೊಬೆನಹಳ್ಳಿ ಅಶೋಕ್, ಆರನಕಟ್ಟೆ ಶಿವಕುಮಾರ್, ವೇದಾ ಶಿವಕುಮಾರ್, ರಾಜಣ್ಣ, ಚನ್ನಬಸವಣ್ಣ, ರಂಗಸ್ವಾಮಿ, ಗಂಗಾಧರ, ಸ್ಥಳೀಯ ಮೇಟಿಕುರ್ಕೆ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.