ಹಿರಿಯೂರು | ವಿಜೃಂಭಣೆಯಿಂದ ಜರುಗಿದ ಶ್ರೀ ಕಣಿವೆ ಮಾರಮ್ಮನ ರಥೋತ್ಸವ

2 Min Read

ಸುದ್ದಿಒನ್, ಹಿರಿಯೂರು, ಮೇ. 10  : ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಮುಂಭಾಗದಲ್ಲಿರುವ ಶ್ರೀ ಕಣಿವೆ ಮಾರಮ್ಮನ ಬ್ರಹ್ಮ ರಥೋತ್ಸವ ಶುಕ್ರವಾರ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಅಲಂಕರಿಸಿದ ರಥದಲ್ಲಿ ಉತ್ಸವಮೂರ್ತಿಯನ್ನು ಮೆರವಣಿಗೆಯೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ಅಲ್ಲದೆ ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ತಿರಿಸುವ ಮೂಲಕ ತನ್ನ ಇಷ್ಟಾರ್ಥಗಳನ್ನು ಪೂರೈಸಿದರು.

ಮಾರಮ್ಮನ ಜಾತ್ರೆಗೆ ಬಿಸಿಲನ್ನು ಲೆಕ್ಕಿಸದೆ ಈ ಬಾರಿ ಜನಸಾಗರವೇ ಹರಿದು ಬಂದಿತ್ತು. ಟ್ರಾಕ್ಟರ್, ಆಟೋ, ಬಸ್, ಬೈಕ್, ಕಾರು, ಇನ್ನೀತರ ವಾಹನಗಳಲ್ಲಿ ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ರಾಜ್ಯದ ವಿವಿಧ ಭಾಗಗಳಿಂದ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರ ದಂಡೇ ರಥೋತ್ಸವದಲ್ಲಿ ಭಾಗಿಯಾಗಿದ್ದರು.

ದೇವಾಲಯ ಹಿನ್ನೆಲೆ : ನೂರಾರು ವರ್ಷಗಳ ಇತಿಹಾಸವಿರುವ ಕಣಿವೆ ಮಾರಮ್ಮದೇವಿಯು ವಾಣಿ ವಿಲಾಸ ಜಲಾಶಯ ಅಣೆಕಟ್ಟೆಯ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆ ನಿರ್ಮಿಸಿದ್ದು, ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎಂಬ ಹೆಸರು ಬಂದಿದೆ. ಇಲ್ಲಿ ಮೇ ತಿಂಗಳಲ್ಲಿ ಕಣಿವೆ ಮಾರಮ್ಮನ ಜಾತ್ರೆ ನಡೆಯುತ್ತದೆ.

ಯಾವುದೇ ಕೆಲಸ ಪ್ರಾರಂಭಕ್ಕೂ ಮೊದಲು ದೇವರನ್ನು ನೆನೆದರೆ ಅವಳು ಕಾಪಾಡಿಯೇ ಕಾಪಾಡುತ್ತಾಳೆ ಅನ್ನೋ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಆ ಕೆಲಸ ಚಿಕ್ಕದೇ ಆಗಲಿ ಅಥವಾ ದೊಡ್ಡದೇ ಆಗಲಿ. ಇದಕ್ಕೆ ಸಾಕ್ಷಿಯಾಗಿ ನಿಂತಿರೋದೆ ಈ ದೇವಾಲಯ. ಇಲ್ಲಿ ತಾಯಿ ಅಂಬಿಕೆನೇ ಆಣೆಕಟ್ಟು ಕಾಯೋಕೆ ನಿಂತಿದ್ದಾಳೆ.

ಹೌದು ಇದೇ ಈ ದೇವಾಲಯದ ವಿಶೇಷತೆಯಾಗಿದೆ. ಇಲ್ಲಿ ತಾಯಿಯ ಪಾದಕ್ಕೆ ತಾಗಿ ಆಣೆಕಟ್ಟು ನಿಂತಿದೆ. ಮಾರಿಕಾಂಬೆಯೇ ತನ್ನ ಪಾದದ ಮೂಲಕ ಆ ಆಣೆಕಟ್ಟು ಹಿಡಿದು ನಿಂತಿದ್ದಾಳೆ ಅನ್ನೋದು ಭಕ್ತರ ನಂಬಿಕೆ. ಅದಕ್ಕೆ ಇಲ್ಲಿನ ಆಣೆಕಟ್ಟಿಗೆ ಮಾರಿಕಣಿವೆ ಡ್ಯಾಂ ಅಂತಾನೆ ಕರಿಯೋದು. ಇದು ಮಾರಿ ಕಣಿವೆ ಡ್ಯಾಂ ಎಂದು ಕರಿಸಿಕೊಳ್ಳೋ ವಾಣಿವಿಲಾಸ ಆಣೆಕಟ್ಟಿನ ಬಳಿಯಿರೋ ಮಾರಿಕಾಂಬ ಅಥವಾ ಕಣಿವೆ ಮಾರಮ್ಮ ದೇವಾಲಯ. ಆಣೆಕಟ್ಟಿಗೆ ತಾಗಿಕೊಂಡೇ ಈ ದೇವಾಲಯ ಇದೆ. ಇಲ್ಲಿರುವ ಮಾರಿಕಾಂಬೆ ಈ ಡ್ಯಾಂಗೆ ಯಾವುದೇ ರೀತಿಯ ತೊಂದರೆ ಬರದ ರೀತಿಯಲ್ಲಿ ಕಾಯುತ್ತಾಳೆ ಅನ್ನೋದು ಇಲ್ಲಿಯ ಜನರ ನಂಬಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *