ಹಿರಿಯೂರು, ಆಗಸ್ಟ್. 11 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಒಳಹರಿವಿನಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಸೋಮವಾರದ ವರದಿಯಲ್ಲಿ ಡ್ಯಾಂಗೆ 1250 ಕ್ಯೂಸೆಕ್ ಒಳಹರಿವು ನೀರು ಹರಿದು ಬಂದಿದೆ. ಇದರಿಂದ ಪ್ರಸ್ತುತ ಜಲಾಶಯ ನೀರಿನ ಸೋಮವಾರಕ್ಕೆ 124.30 ಅಡಿ ತಲುಪಿದೆ. ಜಲಾಶಯ 4ನೇ ಬಾರಿಗೆ ಕೋಡಿ ಬೀಳಲು 5.70 ಅಡಿಯಷ್ಟೆ ಬಾಕಿಯಿದೆ.
ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದರೆ ಬಹುತೇಕ ಈ ತಿಂಗಳು ಅಥವಾ ಮುಂದಿನ ತಿಂಗಳು ಡ್ಯಾಂ ಕೋಡಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಳೆಗಾಲ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಜಲಾಶಯ ಕೋಡಿ ಬೀಳುವ ಸಾಧ್ಯತೆ ಹೆಚ್ಚಿದೆ. ಕಳೆದ ಜನವರಿಯಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಿದ್ದು, ಇದೀಗ ಮತ್ತೆ ಕೋಡಿ ಬಿದ್ದರೆ ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಡ್ಯಾಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇತ್ತ ತಾಲೂಕಿನಲ್ಲಿ ಭಾನುವಾರ ಮಳೆಯ ಪ್ರಮಾಣ ಗಣನೀಯ ಕಡಿಮೆಯಾಗಿದ್ದು, ಹಿರಿಯೂರು 11.2ಮಿಮೀ, ಇಕ್ಕನೂರು 15.2ಮಿಮೀ, ಸೂಗೂರು 18.2 ಮಿಮೀ, ಈಶ್ವರಗೆರೆ 7.4 ಮಿಮೀ ಹಾಗೂ ಬಬ್ಬೂರಿನಲ್ಲಿ 6.6 ಮಿಮೀ ಮಳೆ ದಾಖಲಾಗಿದೆ. ಜೆಜಿ ಹಳ್ಳಿ ಹೋಬಳಿಯ ಯಲ್ಲದಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿಲಾಜನಹಳ್ಳಿ ಗ್ರಾಮದ ಚಿತ್ತಪ್ಪ ಬಿನ್ ಕರಿಯಪ್ಪ ಎನ್ನುವವರ ಶೆಡ್ ಕುಸಿದಿದ್ದು ಶೆಡ್ ನಲ್ಲಿದ್ದ ಸುಮಾರು 30 ಮೇಕೆಗಳ ಪೈಕಿ ನಾಲ್ಕು ಮೇಕೆಗಳು ಮೃತಪಟ್ಟಿರುವುದು ವರದಿಯಾಗಿದೆ.



