ಸುದ್ದಿಒನ್, ಹಿರಿಯೂರು, ಆಗಸ್ಟ್.15 : ಈ ಜಗತ್ತಿನಲ್ಲಿ ಪ್ರಪಂಚ ನೋಡುವವರು ಒಂದಷ್ಟು ಜನರಾದರೆ ಪ್ರಪಂಚದ ಸೌಂದರ್ಯದ ಗಂಧ ಗಾಳಿಯೇ ಗೊತ್ತಿಲ್ಲದೆ, ಇಡೀ ಬದುಕನ್ನು ಕತ್ತಲೆಯಲ್ಲಿಯೇ ಕಳೆಯುವ ಲಕ್ಷಾಂತರ ಜನರಿದ್ದಾರೆ. ಅದೆಷ್ಟೋ ಅಂಧರಿಗೆ ಇಂದಿಗೂ ಜಗತ್ತು ನೋಡುವ ಅದೃಷ್ಟವಿಲ್ಲ. ಕಣ್ಣುದಾನ ಮಾಡುವುದರಿಂದ ಅಂಧರ ಬದುಕಿಗೆ ಬೆಳಕಾಗಬಹುದು ಎಂಬುದನ್ನು ಡಾ.ರಾಜಕುಮಾರ್ ಕುಟುಂಬದವರು ಜಾಗೃತಿ ಮೂಡಿಸಿದ್ದಾರೆ. ಅಪ್ಪು ಅವರು ಕೂಡ ನಿಧನದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದೀಗ ಹಿರಿಯೂರು ತಾಲೂಕಿನ ಗನ್ನಾಯಕನಹಳ್ಳಿಯ ಲೇಪಾಕ್ಷಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬ ಮಾದರಿಯಾಗಿದ್ದಾರೆ.
ಸಾವಿನ ದುಃಖವನ್ನೇ ತಡೆದುಕೊಳ್ಳುವುದಕ್ಕೆ ಕಷ್ಟ. ಅಂತ ನೋವಲ್ಲೂ ಈ ರೀತಿಯ ನಿರ್ಧಾರ ಸಮಾಜಕ್ಕೆ ಮಾದರಿಯೇ ಸರಿ. ಲೇಪಾಕ್ಷಿಗೆ ಇನ್ನು 24 ವರ್ಷ. ಹಿರಿಯೂರು ತಾಲ್ಲೂಕಿನ ಗನ್ನಾಯಕನಹಳ್ಳಿ ನಿವಾಸಿ ಬಿ.ಲೋಕೇಶ್ ಅವರ ಮಗ. ಬೆಂಗಳೂರಿನಲ್ಲಿ ವಾಸವಿದ್ದ ಲೇಪಾಕ್ಷಿಗೆ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.
ಆಗಸ್ಟ್ 12ರಂದು ಲೇಪಾಕ್ಷಿಗೆ ಅಪಘಾತ ಸಂಭವಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಸಾವನ್ನಪ್ಪಿದ್ದಾರೆ. ಮಗನ ಸಾವಿನ ದುಃಖದಲ್ಲೂ ಪೋಷಕರು ಲೇಪಾಕ್ಷಿಯವರ ಕಣ್ಣನ್ನು ಬೆಂಗಳೂರಿನ ಆರ್ ಆರ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಿದ್ದಾರೆ.
ಸೋಮವಾರ ಗನ್ನಾಯಕನ ಹಳ್ಳಿಯಲ್ಲಿ ಅಂತ್ಯಕ್ರಿಯೆಯನ್ನು ನೇರವೆರಿಸಲಾಗಿದೆ. ಈಗಷ್ಟೇ ಕನಸುಗಳಿಗೆ ರೆಕ್ಕೆ ಕಟ್ಟಿದ್ದ ಯುವಕ. ಆದರೆ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ದುಃಖವನ್ನು ಕುಟುಂಬಸ್ಥರಿಂದ ತಡೆದುಕೊಳ್ಳುವುದಕ್ಕೂ ಅಸಾಧ್ಯವಾಗಿದೆ. ಮಕ್ಕಳ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಅಪ್ಪ ಅಮ್ಮನಿಗೆ ಈ ರೀತಿಯ ಸಾವು ಸಂಕಟ ಕೊಡದೆ ಇನ್ನೇನನ್ನು ತಾನೇ ಕೊಡಲು ಸಾಧ್ಯ ಹೇಳಿ. ಸಾವಿನಲ್ಲೂ ಸಾರ್ಥಕತೆ ಮೆರೆಯುವುವವರು ತೀರಾ ವಿರಳ.