ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಕಳೆದ ಕೆಲವು ದಿನಗಳಿಂದ ಮಳೆರಾಯ ಬಿಟ್ಟು ಬಿಡದೆ ಸುರಿಯುತ್ತಿದ್ದಾನೆ. ಇದರಿಂದ ಕೆಲವೊಂದು ಜಲಾಶಯದ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ಅದರಲ್ಲೂ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲಿದೆ ಎಂಬ ನಿರೀಕ್ಷೆ ಇದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯ ಕೋಡಿ ಬೀಳುವ ಸಾಧ್ಯತೆ ಸನಿಹವಿದೆ. ವಾಣಿ ವಿಲಾಸ ಸಾಗರ ಡ್ಯಾಂ ಒಟ್ಟು 135 ಅಡಿ ಎತ್ತರವಿದೆ. 130 ಅಡಿ ತುಂಬಿದರೆ ಸಾಕು ಡ್ಯಾಂ ಕೋಡಿ ಬೀಳಲಿದೆ.
ಇಂದಿನ ವರದಿ ಪ್ರಕಾರ ಡ್ಯಾಂಗೆ 2,426 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 122.85 ಅಡಿ ತಲುಪಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಒಳಹರಿವು ಪ್ರಮಾಣ ಹೆಚ್ಚಾಗಿದೆ.
1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲೆಂದು ಈ ಜಲಾಶಯ ನಿರ್ಮಿಸಲಾಗಿತ್ತು. ಕಳೆದ ಬಾರಿ ಬರಗಾಲವಿದ್ದ ಕಾರಣ ಕೋಡಿ ಬಿದ್ದಿರಲಿಲ್ಲ. ಈ ವರ್ಷ ಕೋಡಿ ಬೀಳುವ ಸಾಧ್ಯತೆ ಇದೆ. ಈಗಾಗಲೇ 122 ಅಡಿ ತಲುಪಿದೆ. ಇನ್ನುಳಿದಿರುವುದು ಕೇವಲ 8 ಅಡಿ ಅಷ್ಟೆ. ಹೀಗೆ ಒಂದೇ ಸಮನೆ ಮಳೆ ಸುರಿದರೆ ಆ ಎಂಟು ಅಡಿಯೂ ಬೇಗ ತುಂಬೊ, ಕೋಡಿ ಬೀಳಲಿದೆ. ಚಿತ್ರದುರ್ಗದಲ್ಲಿ ಮಂಗಳವಾರ ಸುರಿದ ಮಳೆ ಸುಮಾರು 9.9 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಕೋಟೆ ನಾಡಿನಲ್ಲೂ ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಹೊರಗೆ ಹೋಗುವುದಕ್ಕೂ ಜನ ಪರದಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಮಳೆ ವರದಿ : ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಮಂಗಳವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 9.9 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 7.2 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 5.2 ಹಿರಿಯೂರು ತಾಲ್ಲೂಕು 10 ಮಿ.ಮೀ,
ಹೊಳಲ್ಕೆರೆ ತಾಲ್ಲೂಕು 9.3 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 20 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 6.7 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4.6 ಮಿ.ಮೀ, ನಾಯಕನಹಟ್ಟಿ 9.4 ಮಿ.ಮೀ, ಪರಶುರಾಂಪುರ 6 ಮಿ.ಮೀ, ತಳಕು 9 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 5.6 ಮಿ.ಮೀ, ಭರಮಸಾಗರ 5.5 ಮಿ.ಮೀ, ಹಿರೇಗುಂಟನೂರು 5.6 ಮಿ.ಮೀ, ತುರುವನೂರು 3.9 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 13 ಮಿ.ಮೀ, ಐಮಂಗಲ 8.9 ಮಿ.ಮೀ, ಧರ್ಮಪುರ 9 ಮಿ.ಮೀ, ಜವನಗೊಂಡನಹಳ್ಳಿ 10.4 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 12.4 ಮಿ.ಮೀ, ಬಿ.ದುರ್ಗ 7.4 ಮಿ.ಮೀ, ರಾಮಗಿರಿ 6.9 ಮಿ.ಮೀ, ತಾಳ್ಯ 10.5 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 7.6 ಮಿ.ಮೀ, ಮಾಡದಕೆರೆ 11.3 ಮಿ.ಮೀ, ಮತ್ತೋಡು 41.1 ಮಿ.ಮೀ, ಶ್ರೀರಾಂಪುರ 31.6 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 6.7 ಮಿ.ಮೀ ಹಾಗೂ ದೇವಸಮುದ್ರದಲ್ಲಿ 6.8 ಮಿ.ಮೀ ಮಳೆಯಾಗಿದೆ.
29 ಮನೆಗಳು ಭಾಗಶಃ ಹಾನಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 29 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.