ಸುದ್ದಿಒನ್, ಹಿರಿಯೂರು, ಜನವರಿ. 03 : ಹೈವೇಗಳಲ್ಲಿ ಬೃಹತ್ ಗಾತ್ರದ ಲಾರಿಗಳ ಓಡಾಟವೇ ಜಾಸ್ತಿ. ಅದರಲ್ಲೂ ಈ ಬೆಂಗಳೂರಿನಿಂದ ತುಮಕೂರು, ಪುಣೆ ಹೈವೆಯಲ್ಲಿ ಅಪಾರ ಪ್ರಮಾಣದ ಸರಕು ತುಂಬಿದ ಲಾರಿಗಳೇ ಚಲಿಸುತ್ತಿರುತ್ತವೆ. ಇಷ್ಟು ದಿನ ಆ ಲಾರಿಗಳು, ಟ್ರಕ್ ಗಳನ್ನು ನೋಡಿದರೆ ಅಷ್ಟೊಂದು ಆತಂಕವಾಗುತ್ತಿರಲಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ನೆಲಮಂಗಲ ಸಮೀಪ ಒಂದು ಅಪಘಾತವಾಗಿತ್ತು. ಆ ಆಕ್ಸಿಡೆಂಟ್ ಯಾರೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡಿ. ಕಾರಿನ ಮೇಲೆ ಟ್ರಕ್ ಬಿದ್ದು ಆರು ಜನ ಸಾವನ್ನಪ್ಪಿದ್ದರು. ಇದೀಗ ಅಂಥದ್ದೇ ಘಟನೆ ಹಿರಿಯೂರಿನ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದಂತ ಘಟನೆ ಸಂಭವಿಸಿಲ್ಲ.
ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಚಲಿಸುತ್ತಿದ್ದ ಕಂಟೈನರ್ ಲಾರಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬೆಂಗಳೂರು ಕಡೆಯಿಂದ ಚಿತ್ರದುರ್ಗದ ಕಡೆಗೆ ಬರುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಿರಿಯೂರಿನ ಘಟನೆ ನೋಡಿದಾಗ ನೆಲಮಂಗಲ ಘಟನೆ ನಡೆದಾಗ ಹಿರಿಯರ ಮಾತು ನೆನಪಾಗದೆ ಇರಲಾರದು. ಆಯಸ್ಸು ಮುಗಿದಿದ್ದರೆ ಸಣ್ಣ ಹುಲ್ಲು ಕಡ್ಡಿ ಸಾಕು. ಎಡವಿದರೆ ಪ್ರಾಣ ಹೋಗುತ್ತೆ. ಆಯಸ್ಸು ಗಟ್ಟಿಯಾಗಿದ್ದರೆ ಬಂಡೆ ಕಲ್ಲು ಬಂದು ತಲೆ ಮೇಲೆ ಬಿದ್ದರು ಏನು ಆಗಲ್ಲ ಎಂಬುದು. ಎಷ್ಟೋ ಅಪಘಾತಗಳಲ್ಲಿ ಇದು ಉದಾಹರಣೆಯಾಗಿ ಕಂಡಿದೆ. ಹಲವರ ಆಯಸ್ಸು ಗಟ್ಟಿ ಇದ್ದರೆ ದುರಂತ ಸಂಭವಿಸಿದರು ಬದುಕುಳಿದ ಸಾಕ್ಷಿಗಳಿವೆ.